ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಆಗಸ್ಟ್ 15ರಿಂದ “ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆಗೆ” ಅಭಿಯಾನ.

ಕುಕ್ಕೆ ಸುಬ್ರಹ್ಮಣ್ಯ:ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ಮಾಹಿತಿ ನೀಡುವ ಸಭೆ ನಡೆಯಿತು. ಸಭೆಯಲ್ಲಿ ದೇವಸ್ಥಾನದ ಆವರಣ ಹಾಗೂ ವ್ಯಾಪಾರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಲಾಯಿತು.


ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಬಗ್ಗೆ ಮಾನ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ (ಸಂಖ್ಯೆ E-1663713 / HRICE ADMOMISC 56/2025, ದಿನಾಂಕ 11-06-2025) ಅನ್ವಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ, ಪ್ಲಾಸ್ಟಿಕ್ ಬಳಕೆ ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರೊಂದಿಗೆ ಅಂಗಡಿಗಳನ್ನು ತೆರವುಗೊಳಿಸುವ ಅಥವಾ ಮುಚ್ಚುವಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಸ್ಪಷ್ಟಪಡಿಸಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಅಂಗಡಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

2025ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನದಂದು “ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆಗೆ” ಅಭಿಯಾನದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ದೇವಸ್ಥಾನವೆಂದು ಘೋಷಿಸಲಾಗುವುದು. ಭಕ್ತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಹಕರಿಸಿ, ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.




ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಜಿತ್ ಕುಮಾರ್, ಶ್ರೀಮತಿ ಸೌಮ್ಯ ಭರತ್, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಲೋಲಾಕ್ಷ ಕೈಕಂಬ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ತಾಲೂಕು ಕೆ.ಡಿ.ಪಿ ಸದಸ್ಯ ಶಿವರಾಮ ರೈ ,ಸುಬ್ರಹ್ಮಣ್ಯ ಗ್ತಾ.ಪಂ  ಪಿ.ಡಿ.ಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ಇಂಜಿನಿಯರ್ ಉದಯ ಕುಮಾರ್, ಯೋಗೀಶ್,
  ಮಾದವ ದೇವರಗದ್ದೆ, ರವಿ ಕಕ್ಕೆಪದವು, ಗಣೇಶ್ ಪ್ರಸಾದ್, ಯಜ್ಞೇಶ್ ಆಚಾರ್, ಸುದರ್ಶನ ಜೋಯಿಸ, ಗೋಪಾಲ್ ಎಣ್ಣೆ ಮಜಲು, ರವೀಂದ್ರ ಸುಬ್ರಹ್ಮಣ್ಯ, ದೀಪಕ್ ನಂಬಿಯಾರ್, ರತ್ನಾವತಿ ನೂಚಿಲ, ನಿತಿಶ್,  ಸಂತೋಪ್ , ದಿನೇಶ್
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.

Post a Comment

Previous Post Next Post