ಮಂಗಳೂರು, ಜುಲೈ 30, 2025 – ಮಂಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರಮುಖ ತೀರ್ಪು ನೀಡಿದ್ದು, ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
2023ರ ಮೇ 30ರಂದು, ಬಸ್ತಿ ಗುಡ್ಡೆ ಮನೆ, ಸಜಿಪನಡು ಗ್ರಾಮ, ಬಂಟ್ವಾಳ ತಾಲೂಕು ನಿವಾಸಿಯಾದ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ (ವಯಸ್ಸು: 30) ಎಂಬಾತನು ಅಪ್ರಾಪ್ತ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಚಿತ್ರೀಕರಣ ಮಾಡಿ ಬೆದರಿಕೆಯೊಡ್ಡಿದ ಆರೋಪವಿತ್ತು.
ಪೀಡಿತ ಬಾಲಕಿ 2023ರ ಡಿಸೆಂಬರ್ 23ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ, ಐಪಿಸಿ ಕಲಂ 363, 376(2)(ಎನ್), 376(3), 506 ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು (ಅ.ಕ್ರ: 128/2023).
ಆರೋಪಿತನು ಎಂಟು ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದು, 2024ರ ಜುಲೈ 2ರಂದು ಬಂಧನಕ್ಕೆ ಒಳಗಾಗಿದ್ದ. ಈ ಪ್ರಕರಣದ ತನಿಖೆಯನ್ನು ಮೊದಲಿಗೆ ಪೊಲೀಸ್ ನಿರೀಕ್ಷಕ ಗುರುರಾಜ್ ಅವರು ಪ್ರಾರಂಭಿಸಿ, ನಂತರ ರಾಜೇಂದ್ರ ಬಿ. ಅವರು ಪೂರೈಸಿದರು. ನ್ಯಾಯಾಲಯಕ್ಕೆ ದಾಖಲಿಸಿದ ಚುಟುಕು ಆರೋಪಪತ್ರದ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಯಿತು.
ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ) ಮಂಗಳೂರು ಇಲ್ಲಿ ನಡೆದ ವಿಚಾರಣೆಯಲ್ಲಿ, ಸರಕಾರಿ ಅಭಿಯೋಜಕ ಶ್ರೀ ಬದ್ರಿನಾಥ್ ಹಾಗೂ ವಿಶೇಷ ಸರಕಾರಿ ಅಭಿಯೋಜಕಿ ಶ್ರೀಮತಿ ಸಹನಾ ದೇವಿ ಬೋಳೂರು ಅವರು ಸರಕಾರದ ಪರವಾಗಿ ವಾದ ಮಂಡಿಸಿದರು.
ತೀರ್ಪು ನೀಡಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಅತ್ಯಾಚಾರ ಆರೋಪದ ಮೇಲೆ ಆರೋಪಿತನಿಗೆ 20 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ, ಮತ್ತು ಬೆದರಿಕೆ ನೀಡಿದ ಕಾರಣಕ್ಕೆ 1 ವರ್ಷ ಜೈಲು ಹಾಗೂ ₹5,000 ದಂಡ ವಿಧಿಸಿದ್ದಾರೆ.
ಈ ತೀರ್ಪು ಮಂಗಳೂರು ನಗರದ ಮಹಿಳಾ ಮತ್ತು ಮಕ್ಕಳ ರಕ್ಷಣೆಗಾಗಿ ಹೋರಾಡುವ ಪ್ರಕರಣಗಳಿಗೆ ತೀಕ್ಷ್ಣ ಸಂದೇಶ ನೀಡುತ್ತದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟಿದೆ.
Post a Comment