ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಶ್ಲೇಷ ಬಲಿ ಮಂಟಪದಲ್ಲಿ 3.5 ಲಕ್ಷ ವೆಚ್ಚದಲ್ಲಿ ಎಕ್ಸಾಸ್ಟ್ ಹುಡ್ ಅಳವಡಿಕೆ.

ಕುಕ್ಕೆ ಸುಬ್ರಹ್ಮಣ್ಯ; ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಶ್ಲೇಷ ಬಲಿ ಪೂಜೆ ನಡೆಯುವ ಮಂಟಪದಲ್ಲಿ, ಭಕ್ತರಿಗೆ ಹೆಚ್ಚು ಆರಾಮ ಹಾಗೂ ಸೌಕರ್ಯ ಒದಗಿಸುವ ಉದ್ದೇಶದಿಂದ, ಸುಮಾರು ₹3.5 ಲಕ್ಷ ವೆಚ್ಚದಲ್ಲಿ ಆಧುನಿಕ ಎಕ್ಸಾಸ್ಟ್ ಹುಡ್ "ಹೊಗೆ ಹೀರಿಕೆ ಯಂತ್ರ" ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದಂತೆ, ಆಶ್ಲೇಷ ಬಲಿ ಪೂಜೆ ದೇವಸ್ಥಾನದ ಪ್ರಮುಖ ಹಾಗೂ ವಿಶೇಷ ಸೇವೆಯಾಗಿದ್ದು, ದೇಶ–ವಿದೇಶಗಳಿಂದ ಸಾವಿರಾರು ಭಕ್ತರು ಕುಕ್ಕೆಗೆ ಆಗಮಿಸುತ್ತಾರೆ. ಈ ಪೂಜೆ ನಾಗದೋಷ ಪರಿಹಾರ, ಸರ್ಪದೋಷ ಪರಿಹಾರ ಹಾಗೂ ವೈಯಕ್ತಿಕ ಅಭಿವೃದ್ಧಿ ಹೀಗೆ ಅನೇಕ ಉದ್ದೇಶಗಳಿಂದ ನೆರವೇರಿಸಲಾಗುತ್ತದೆ.

ಪೂಜೆ ಸಮಯದಲ್ಲಿ ಹೋಮ ನಡೆಯುವ ಕಾರಣ ಮಂಟಪದಲ್ಲಿ ಹೆಚ್ಚಿನ ಪ್ರಮಾಣದ ಹೊಗೆ ಉಂಟಾಗುತ್ತಿದ್ದು, ಭಕ್ತರಿಗೆ ತೊಂದರೆ ಆಗದಂತೆ ಈ ಹೊಸ ಎಕ್ಸಾಸ್ಟ್ ಹುಡ್ "ಹೊಗೆ ಹೀರಿಕೆ ಯಂತ್ರ" ವ್ಯವಸ್ಥೆ ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ ಹೊಗೆ ಹೊರಗೆ ಹರಿದುಹೋಗುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಪೂಜೆಯ ಸಮಯದಲ್ಲಿ ಭಕ್ತರಿಗೆ ಸುಗಮ ಹಾಗೂ ಆರಾಮದಾಯಕ ವಾತಾವರಣ ಒದಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.

ಈ ಕ್ರಮದಿಂದ ದೇವಸ್ಥಾನದಲ್ಲಿ ನಡೆಯುವ ಆಶ್ಲೇಷ ಬಲಿ ಪೂಜೆಯ ಸಮಯದಲ್ಲಿ ಭಕ್ತರಿಗೆ ಇನ್ನಷ್ಟು ಅನುಕೂಲ ಆಗಲಿದೆ.

Post a Comment

Previous Post Next Post