ಬೆಳ್ತಂಗಡಿ, ಆಗಸ್ಟ್ 03: ಸಮಾಜದಲ್ಲಿ ಕೋಮುಸೌಹಾರ್ಧತೆಗೆ ಧಕ್ಕೆ ಉಂಟುಮಾಡುವಂತಹ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆ ನಿವಾಸಿ ಕಲಂದರ್ ಪುತ್ತುಮೋನು (42) ಎಂಬವರು ಈ ಕುರಿತು ನೀಡಿದ ದೂರಿನ ಮೇರೆಗೆ, ಅವರು ತಮ್ಮ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ‘ಕುಲುಮೆ’ ಎಂಬ ಫೇಸ್‌ಬುಕ್ ಗ್ರೂಪಿನಲ್ಲಿ AyshuAysha ಎಂಬ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ವಿವಿಧ ಕೋಮುಗಳ ನಡುವೆ ವೈಷಮ್ಯ ಉಂಟುಮಾಡುವ ರೀತಿಯ ಸುಳ್ಳು ಹಾಗೂ ಭ್ರಾಂತಿದಾಯಕ ಮಾಹಿತಿಯನ್ನು ಪೋಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ.
ಈ ಸಂಬಂಧ ಅವರು ಬೆಳ್ತಂಗಡಿ ಠಾಣೆಗೆ ದೂರು ಸಲ್ಲಿಸಿದ್ದು, ಪೋಲೀಸರು ಅ.ಕ್ರ: 70/2025, ಭಾರತೀಯ ನ್ಯಾಯ ಸಂಹಿತೆ (BNS) ಅಧಿನಿಯಮದ ಕಲಂ 353 (1)(b), 353(2) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಪೊಲೀಸರಿಂದ ಪ್ರಾಥಮಿಕ ತನಿಖೆ ಮುಂದುವರಿಸಲಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಉಂಟಾಗದಂತೆ ಜಾಗೃತಿ ವಹಿಸಬೇಕೆಂಬ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹಾಗೂ ದುರುದ್ದೇಶಪೂರಿತ ಮಾಹಿತಿಗಳನ್ನು ಹರಡುವುದು ಕಾನೂನುಬಾಹಿರವಾಗಿದೆ ಎಂಬುದನ್ನು ಪ್ರಜೆಗಳು ಗಮನದಲ್ಲಿಡಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Post a Comment