ಕಡಬ ತಾಲೂಕು ಅಲಂಕಾರು ಗ್ರಾಮದಲ್ಲಿ ಕೋಳಿ ಆಹಾರ ಲಾರಿ ಖಾಲಿ ಮಾಡುವ ವೇಳೆ ವಾಗ್ವಾದ ಉಂಟಾಗಿ, ವ್ಯಕ್ತಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಪೊಲೀಸ್ ವರದಿಯ ಪ್ರಕಾರ, ಪಿರ್ಯಾದಿದಾರರಾದ ಪ್ರೀತಂ ಎನ್ (30), ವಾಮನ ದೇವಾಡಿಗ ಅವರ ಪುತ್ರ, ಕಲ್ಯಾಣಿ ನಿಲಯ, ನಾರ್ತಿಲ ಮನೆ, ಅಲಂಕಾರು ಗ್ರಾಮದವರು, ಜುಲೈ 7ರಂದು ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ತಮ್ಮ ಬಾಬ್ತು ಕೋಳಿ ಪಾರಂಗೆ ಕೋಳಿ ಆಹಾರ ತಂದು ಖಾಲಿ ಮಾಡಿಸಿ, ಲಾರಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದರಿಂದ ಬೇರೆ ವಾಹನ ತರಿಸಿ ಎಳೆಯುವ ಕೆಲಸ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ, ಅಲಂಕಾರು ಗ್ರಾಮದ ಕಮ್ಮಿತ್ತಿಲು ಮನೆ ನಿವಾಸಿ ಲೊಕೇಶ ಗೌಡ ಎಂಬವರು ಸ್ಥಳಕ್ಕೆ ಬಂದು, ಪಿರ್ಯಾದಿದಾರರು ಹಾಗೂ ಲಾರಿ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಲ್ಲಿದ್ದ ಚಾಕುವನ್ನು ತೋರಿಸಿ, ಪಿರ್ಯಾದಿದಾರರ ಕುತ್ತಿಗೆ ಹಿಡಿದು ಗೋಡೆಗೆ ದೂಡಿ ಹಾಕಿದ್ದಾರೆ. ಇದರಿಂದ ಬೆನ್ನಿಗೆ ಗೋಡೆ ತಾಗಿ ಒಳ ನೋವು ಉಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಘಟನೆಯ ನಂತರ, ಪ್ರೀತಂ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 55/2025, ಕಲಂ: 115(2), 352, 351(3) BNS-2023 ಅನ್ವಯ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
Post a Comment