ಶಿರಾಡಿ, ಆಗಸ್ಟ್ 6:ಇತ್ತೀಚಿನ ಭಾರೀ ಮಳೆಯಿಂದಾಗಿ ಶಿರಾಡಿ ಗ್ರಾಮದ ಮುಂಡಾಜೆ - ಕುದ್ಕುಳಿ - ಬರಮೇಲು ಮುಖ್ಯ ರಸ್ತೆಯ ಬಳಿ ಹರಿಯುವ ನದಿಯು ಪ್ರವಾಹದ ರೂಪದಲ್ಲೇ ರಸ್ತೆ ಮೇಲೆ ಹರಿದು, ರಸ್ತೆಯ ಗುಣಮಟ್ಟಕ್ಕೆ ಗಂಭೀರ ಹಾನಿಯುಂಟುಮಾಡಿದೆ. ಸುಮಾರು 200 ಮೀಟರ್ ಉದ್ದದ ರಸ್ತೆಯಲ್ಲಿ ತಡೆಗೋಡೆ ಇಲ್ಲದ ಕಾರಣದಿಂದಾಗಿ ನದಿನೀರು ನೇರವಾಗಿ ರಸ್ತೆಯಲ್ಲಿ ಹರಿದು, ಅಲ್ಲಿಂದ ಕೃಷಿತೋಟಗಳತ್ತ ಹರಿದು ಹಾನಿ ಉಂಟುಮಾಡಿದೆ.
ಇಂದು ಘಟನಾ ಸ್ಥಳಕ್ಕೆ ಮಾನ್ಯ ಸುಳ್ಯ
ಶಾಸಕಿ ಭಾಗೀರಥಿ ಮೂರುಳ್ಯಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಹಾನಿಯ ಬಗ್ಗೆ ಸ್ಥಳೀಯರ ಜೊತೆ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ಥಳೀಯರು ಶಾಸಕರಿಗೆ ನೀರಿನ ಪ್ರವಾಹದಿಂದ ಆಗುತ್ತಿರುವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿದರು. ಮಳೆಯಾದಾಗ ಇಂತಹ ಪರಿಸ್ಥಿತಿ ಉಂಟಾಗುತ್ತಿದ್ದು, ತಡೆಗೋಡೆ ನಿರ್ಮಾಣದ ಅಗತ್ಯತೆಯಿದೆ ಎಂದು ಒತ್ತಿಸಿದರು.
ಈ ಸಂದರ್ಭದಲ್ಲಿ ಭಾಸ್ಕರ ಇಚಲಂಪಾಡಿ, ಮಧುಸೂದನ್ ಕೊಂಬಾರು, ಕಿಶೋರ್ ಶಿರಾಡಿ, ಪ್ರಕಾಶ್ ಶಿರಾಡಿ, ಪಂಚಾಯತ್ ಸದಸ್ಯ ಲಕ್ಷ್ಮಣ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು.
ರಸ್ತೆ ಹಾನಿ ಹಾಗೂ ಕೃಷಿತೋಟಗಳಿಗೆ ನಷ್ಟವಾಗುತ್ತಿರುವ ಈ ಕುರಿತು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಂಡು ಸಮರ್ಪಕ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
Post a Comment