ಮಂಗಳೂರು:ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ ಲೇಔಟ್ ನಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಕಾಣೆಯಾದ ಯುವಕ ಮುಖೇಶ್ ಮಂಡಲ್ (27) ಅವರ ಕೊಲೆ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಪತ್ತೆಹಚ್ಚಿದ್ದಾರೆ.
ಪ್ರಕರಣದ ಹಿನ್ನೆಲೆ
ದಿನಾಂಕ 24-06-2025 ರಂದು ರಾತ್ರಿ 9 ಗಂಟೆಯ ನಂತರ ಮುಖೇಶ್ ಮಂಡಲ್ ಕಾಣೆಯಾದ ಬಗ್ಗೆ ಆತನ ಸಹೋದ್ಯೋಗಿ ದೀಪಾಂಕರ್ ನೀಡಿದ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಅ.ಕ್ರ 83/2025ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭಗೊಂಡಿತ್ತು.
ಬಳಿಕ 21-08-2025 ರಂದು ಬೆಳಿಗ್ಗೆ 10 ಗಂಟೆಗೆ ಅದೇ ಲೇಔಟ್‌ನಲ್ಲಿರುವ STP ಟ್ಯಾಂಕ್ ಒಳಗೆ ಮುಖೇಶ್ ಮಂಡಲ್ ಅವರ ಶವ ಪತ್ತೆಯಾದಿತ್ತು. ಶವ ಕೊಳೆತುಹೋದ ಸ್ಥಿತಿಯಲ್ಲಿ ಸಿಕ್ಕಿದ್ದು, ಪ್ರಕರಣಕ್ಕೆ ಕೊಲೆ ಶಂಕೆ ಮೂಡಿತ್ತು.
ಆರೋಪಿಯ ಪತ್ತೆ
ತನಿಖೆಯ ಸಮಯದಲ್ಲಿ ಲಕ್ಷ್ಮಣ್ ಮಂಡಲ್ @ ಲಖನ್ (30), ಮೂಲ: ಪಶ್ಚಿಮ ಬಂಗಾಳ ಅವರು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ತನ್ನ ಪತ್ನಿಯ ಅಶ್ಲೀಲ ವೀಡಿಯೊಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿದ್ದನ್ನು ಮೃತ ಮುಖೇಶ್ ತೋರಿಸಿದ್ದರಿಂದ ಕೋಪಗೊಂಡು,
24-06-2025 ರಂದು ರಾತ್ರಿ 9 ಗಂಟೆಗೆ ಮಧ್ಯಪಾನ ಸಮಯದಲ್ಲಿ ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ನಂತರ ಮೃತದೇಹವನ್ನು ಮರೆಮಾಚಲು STP ಟ್ಯಾಂಕ್ ಒಳಗೆ ಹಾಕಿ ಪ್ಲೈವುಡ್ ಶೀಟ್ ಹಾಕಿ ಮುಚ್ಚಿದ್ದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.
ತನಿಖಾ ತಂಡದ ಕಾರ್ಯಾಚರಣೆ
ಆರೋಪಿಯನ್ನು ಪತ್ತೆಹಚ್ಚಲು ಸುರತ್ಕಲ್ ಠಾಣೆಯ ಪಿಎಸ್ಐ ಶಶಿಧರ ಶೆಟ್ಟಿ ಹಾಗೂ ಎಎಸ್‌ಐ ರಾಜೇಶ್ ಆಳ್ವಾ ನೇತೃತ್ವದ ತಂಡವನ್ನು ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಲಾಗಿತ್ತು.
ಆರೋಪಿ 04-09-2025 ರಂದು ಬಂಧನಕ್ಕೊಳಗಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲ್ಪಟ್ಟಿದ್ದು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆರೋಪಿಯ ವಿರುದ್ಧ ಪಶ್ಚಿಮ ಬಂಗಾಳದ ರತುವಾ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ಈಗಾಗಲೇ ದಾಖಲಾಗಿರುವುದು ಬಹಿರಂಗವಾಗಿದೆ.
ತನಿಖೆಯಲ್ಲಿ ಪಾಲ್ಗೊಂಡವರು
ಸುರತ್ಕಲ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ, ಪಿಎಸ್ಐಗಳಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್‌ಐಗಳಾದ ರಾಜೇಶ್ ಆಳ್ವಾ, ತಾರನಾಥ, ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ರಾಜೇಂದ್ರ ಪ್ರಸಾದ್, ಕಾರ್ತೀಕ್, ಮೋಹನ್, ನಾಗರಾಜ್ ಇವರ ಶ್ರಮದಿಂದ ಪ್ರಕರಣ ಪತ್ತೆಯಾಗಿದೆ.
ಈ ಕಾರ್ಯಾಚರಣೆಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀ ಶ್ರೀಕಾಂತ್ ಕೆ ಮಾರ್ಗದರ್ಶನ ನೀಡಿದ್ದರು.
Post a Comment