ಮಂಗಳೂರು:1998ರ ಡಿಸೆಂಬರ್ 31ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ಸುಮಾರು 26 ವರ್ಷಗಳ ನಂತರ ಮಂಗಳೂರಿನ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ನಗರ ಪೊಲೀಸ್ ಇಲಾಖೆಯ ಪ್ರಕಾರ, ಆ ಸಮಯದಲ್ಲಿ ಬೆಂಕಿ ಹಚ್ಚಿ ಅಶಾಂತಿ ಸೃಷ್ಟಿಸಿದ ಪ್ರಕರಣ (ಅ.ಕ್ರ. 06/1999)ದಲ್ಲಿ ಆರೋಪಿ ಲೀಲಾಧರ್ (52), ಪಕ್ಷಿಕೆರೆ ಕೆಮ್ರಾಲ್ ಗ್ರಾಮ ಹಾಗೂ ಚಂದ್ರಹಾಸ್ ಕೇಶವ ಶೆಟ್ಟಿ (59), ಪೆಡುಪಣಂಬೂರು ಹಳೆಯಂಗಡಿ ಇವರಿಬ್ಬರು ಘಟನೆಯ ನಂತರದಿಂದಲೇ ತಲೆಮರೆಸಿಕೊಂಡಿದ್ದರು.
ಬಂಧನದ ವಿವರ
ಆರೋಪಿ ಲೀಲಾಧರ್ ಇತ್ತೀಚೆಗೆ ಸ್ವದೇಶಕ್ಕೆ ಬಂದು ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವೇಳೆ ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಇನ್ನೊಬ್ಬ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿ ದುಬೈಯಿಂದ ಭಾರತಕ್ಕೆ ಮರಳುತ್ತಿದ್ದ ವೇಳೆ, ಆಗಸ್ಟ್ 30ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣದ ಹಿನ್ನೆಲೆ
1998ರ ಕೋಮು ಗಲಭೆ ಪ್ರಕರಣದಲ್ಲಿ ಹಲವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ಲೀಲಾಧರ್ ಹಾಗೂ ಚಂದ್ರಹಾಸ್ ಕೇಶವ ಶೆಟ್ಟಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೇ ದೀರ್ಘಕಾಲ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಾನ್ಯ ಹಿರಿಯ CJ & JMFC ನ್ಯಾಯಾಲಯ ಮೂಡಬಿದ್ರಿ ಪ್ರಕರಣವನ್ನು LPC No 10/2017 ಎಂದು ಘೋಷಿಸಿತ್ತು.
ಹೊಸ ಪ್ರಕರಣಗಳು ದಾಖಲು
ನ್ಯಾಯಾಲಯದಿಂದ ಹೊರಡಿಸಲಾದ ಉದ್ಘೋಷನಾ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದರಿಂದ ಇವರಿಬ್ಬರ ವಿರುದ್ಧ ಪ್ರತ್ಯೇಕವಾಗಿ 88/2025 ಮತ್ತು 94/2025 ಪ್ರಕರಣಗಳನ್ನು 208, 209 ಬಿ.ಎನ್.ಎಸ್ ಕಲಂಗಳಡಿ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
إرسال تعليق