ಸುಳ್ಯ: ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
2022ರ ಏಪ್ರಿಲ್ 25ರಂದು ಸುಳ್ಯದಿಂದ ಪುತ್ತೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ, ಯುವತಿ ಕುಳಿತಿದ್ದ ಸೀಟಿನ ಪಕ್ಕ ಕುಳಿತಿದ್ದ ಆರೋಪಿಯು ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಮಡ್ನೂರು ಗ್ರಾಮದ ನಿವಾಸಿ ಮೊಹಮ್ಮದ್ ಸತ್ತಾರ್.
ಈ ಪ್ರಕರಣದ ತನಿಖೆಯನ್ನು ಪುತ್ತೂರು ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀ ರಾಜೇಶ್ ಕೆ.ವಿ. ಅವರು ಕೈಗೊಂಡು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಪುತ್ತೂರು ಪ್ರಧಾನ ಹಿರಿಯ ಸಿವಿಲ್ ಹಾಗೂ ಎ.ಸಿ.ಜೆ.ಎಂ. ನ್ಯಾಯಾಧೀಶೆ ಶ್ರೀಮತಿ ಪ್ರಕೃತಿ ಕಲ್ಯಾಣಪುರ್ ಅವರು, ಆರೋಪಿಯ ಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು. ಆರೋಪಿಗೆ 4 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಇನ್ನೊಂದು ತಿಂಗಳ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕೆಯಾದ ಶ್ರೀಮತಿ ಕವಿತಾ ಕೆ. ಅವರು ವಾದಿಸಿದರು.
إرسال تعليق