ದಕ್ಷಿಣ ಕನ್ನಡದಲ್ಲಿ ಗೋಹತ್ಯೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ — ಮೂವರು ಆರೋಪಿಗಳ ಕಸಾಯಿಖಾನೆ, ಮನೆ ಹಾಗೂ ಜಾಗ ಜಪ್ತಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಹತ್ಯೆ ಹಾಗೂ ಅಕ್ರಮ ಮಾಂಸ ವ್ಯಾಪಾರದ ವಿರುದ್ಧ ಪೊಲೀಸ್ ಇಲಾಖೆ ಮುಂದುವರಿದ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮೂವರು ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ – 2020 ಹಾಗೂ ಭಾರತೀಯ ದಂಡ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯಕ್ಕೆ ಬಳಸಿದ ಸ್ಥಳಗಳು ಹಾಗೂ ಕಟ್ಟಡಗಳನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣೆ (ಅ.ಕ್ರ.125/2025):
ಸಂಗಬೆಟ್ಟು ಗ್ರಾಮದ ಕೆರೆಬಳಿ ಪ್ರದೇಶದ ನಾಸೀರ್‌ ಮತ್ತು ಇತರರು ದನ ವಧೆ ನಡೆಸಿದ್ದ ಸ್ಥಳವಾದ ಮನೆ, ಕಸಾಯಿಖಾನೆಯ ಶೆಡ್ ಹಾಗೂ ಜಾನುವಾರು ಕಟ್ಟಿ ಇಟ್ಟಿದ್ದ ಶೆಡ್‌ಗಳನ್ನು ತನಿಖಾಧಿಕಾರಿಗಳು ಕಲಂ 8 (1) ರ ಪ್ರಕಾರ ಜಪ್ತಿ ಮಾಡಿಕೊಂಡು ಉಪವಿಭಾಗಿ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ಸಲ್ಲಿಸಿದ್ದಾರೆ.

ಬೆಳ್ತಂಗಡಿ ಠಾಣೆ (ಅ.ಕ್ರ.103/2025):
ಕುವೆಟ್ಟು ಗ್ರಾಮದ ಮಹಮ್ಮದ್‌ ರಫೀಕ್‌ ಅವರ ಮನೆ ಹತ್ತಿರದ ಖಾಲಿ ಜಾಗದಲ್ಲಿ ಅಕ್ರಮ ಗೋಹತ್ಯೆ ನಡೆದಿರುವುದು ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಅದೇ ಸ್ಥಳವನ್ನು ಜಪ್ತಿ ಮಾಡಿ ಉಪವಿಭಾಗಿ ದಂಡಾಧಿಕಾರಿ ಪುತ್ತೂರು ರವರಿಗೆ ವರದಿ ಸಲ್ಲಿಸಿದ್ದಾರೆ.

ಉಪ್ಪಿನಂಗಡಿ ಠಾಣೆ (ಅ.ಕ್ರ.76/2025):
ಆರೋಪಿ ಮೊಹಮ್ಮದ್‌ ಮನ್ಸೂರ ಮಂಗಳೂರು ನಗರದ ಜೆ.ಎಮ್‌ ರಸ್ತೆ ಭಟ್ಕಳ ಬಜಾರ್‌ ಬಂದರ್‌ ಕುದ್ರೋಳಿ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳವನ್ನು ತನಿಖಾಧಿಕಾರಿಗಳು ಜಪ್ತಿ ಮಾಡಿ ಉಪವಿಭಾಗಿ ದಂಡಾಧಿಕಾರಿ ಮಂಗಳೂರು ರವರಿಗೆ ವರದಿ ನೀಡಿದ್ದಾರೆ.

ಇದಕ್ಕೂ ಮೊದಲು, ಬಂಟ್ವಾಳ ಗ್ರಾಮಾಂತರ ಠಾಣಾ (ಅ.ಕ್ರ.123/2025) ವ್ಯಾಪ್ತಿಯ ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾರಿಪಳ್ಳ ಹಸನಬ್ಬ ರವರ ಅಕ್ರಮ ಕಸಾಯಿಖಾನೆಗೂ ಉಪವಿಭಾಗಿ ದಂಡಾಧಿಕಾರಿಯವರು ಮುಟ್ಟುಗೋಲು ಹಾಕಿದ್ದರು — ಇದು ರಾಜ್ಯದಲ್ಲಿಯೇ ಮೊದಲ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ಘಟಕದ ಈ ಕ್ರಮದ ಮೂಲಕ ಕಾನೂನುಬಾಹಿರ ಗೋಹತ್ಯೆ ಹಾಗೂ ಅಕ್ರಮ ಮಾಂಸ ವ್ಯಾಪಾರದ ವಿರುದ್ಧ ಕಠಿಣ ಸಂದೇಶ ನೀಡಲಾಗಿದ್ದು, ಇಂತಹ ಚಟುವಟಿಕೆಗಳಿಗೆ ಸ್ಥಳಾವಕಾಶ ನೀಡುವವರ ಮೇಲೆಯೂ ಕಾನೂನು ಕ್ರಮ ಮುಂದುವರೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Post a Comment

أحدث أقدم