ನೆಲ್ಯಾಡಿ : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶಬರೀಶ ಯಕ್ಷಗಾನ ಕಲಾ ಕೇಂದ್ರದ 8ನೇ ವಾರ್ಷಿಕೋತ್ಸವ ನವೆಂಬರ್ 8ರಂದು ವಿಜೃಂಭಣೆಯಿಂದ ನಡೆಯಲಿದೆ. ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ “ಏಕಾದಶಿ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಸಂಜೆ 7 ಗಂಟೆಯಿಂದ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಕಿರಣ್ ಚಂದ್ರ ಪುಷ್ಪಗಿರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಲಾ ಕೇಂದ್ರದ ಅಧ್ಯಕ್ಷರು ಸುಧೀರ್ ಕುಮಾರ್ ಕೆ.ಎಸ್., ಗಣೇಶ ಸಾಯಿ ಕೃಷ್ಣಭವನ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ದಿನ ಸಂಜೆ 6 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ರಂಗಪೂಜೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸಭಾಕಾರ್ಯಕ್ರಮ ನಡೆಯಲಿದೆ. ಕಿರಣ್ ಚಂದ್ರ ಪುಷ್ಪಗಿರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆ ಶಬರೀಶ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಡಬ ತಾಲೂಕು ಉಪತಹಶೀಲ್ದಾರ್ ಗೋಪಾಲ್ ಕೆ., ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಸದಾನಂದ ಕುಂದರ್, ನೆಲ್ಯಾಡಿ ಪಿ.ಸಿ.ಎಸ್.ಎಸ್ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್ ಮತ್ತು ಕಿಶನ್ ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನ ಪೋಷಕರಾದ ಸುಬ್ರಮಣ್ಯದ ಪದ್ಮನಾಭ ಮುಚಿಂತಾಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಯಕ್ಷಬೊಳ್ಳಿ ದಿನೇಶ್ ಕಡಬ ನಿರೂಪಣೆ ಮಾಡಲಿದ್ದಾರೆ. ಯಕ್ಷಗಾನದ ನಂತರ ಅನ್ನಸಂತರ್ಪಣೆ ವ್ಯವಸ್ಥೆಯೂ ಇರಲಿದೆ.
Post a Comment