*ಕುಕ್ಕೆ: ನ.14ರಿಂದ ಡಿ.02ರ ತನಕ ಸರ್ಪಸಂಸ್ಕಾರ ಸೇವೆ ಇಲ್ಲ:ಜಾತ್ರಾ ದಿನ ಸೇವೆ ವ್ಯತ್ಯಯ:*

ಸುಬ್ರಹ್ಮಣ್ಯ: ನ.14.ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.16ರಿಂದ ಡಿ.2ರ ತನಕ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನ.14ರಿಂದ ಡಿ.02ರ ತನಕ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ನೆರವೇರುವುದಿಲ್ಲ.ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಡಿ.03ರಿಂದ ಸರ್ಪಸಂಸ್ಕಾರ ಆರಂಭ:
ನ.14ರಂದು ನ.13ರಂದು ಆರಂಭವಾದ ಸರ್ಪಸಂಸ್ಕಾರ ಸೇವೆ ಕೊನೆಗೊಳ್ಳುತ್ತದೆ ಆದರೆ ನ.14ಕ್ಕೆ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ.ನ.15ರಂದು ಶನಿವಾರ ಏಕಾದಶಿ ಹಾಗೂ ಮೂಲಮೃತ್ತಿಕಾ ಪ್ರಸಾದ ವಿತರಣೆ, ನ.16ರಂದು ಕೊಪ್ಪರಿಗೆ ಏರಿ ಜಾತ್ರಾ ಮಹೋತ್ಸವ ಆರಂಭವಾಗುವುದರಿಂದ ನ.14ರಿಂದಲೇ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ. ಅಲ್ಲದೆ ಡಿ.2ರಂದು ಕೊಪ್ಪರಿಗೆ ಇಳಿಯುವವರೆಗೆ ಸರ್ಪಸಂಸ್ಕಾರ ಇರುವುದಿಲ್ಲ. ಡಿ.03 ಬುಧವಾರದಿಂದ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.
 ಜಾತ್ರಾ ಸಮಯ ಸೇವೆಯಲ್ಲಿ ವ್ಯತ್ಯಯ:
 ಲಕ್ಷದೀಪೋತ್ಸವ(ನ.19), ಚೌತಿ(ನ.24), ಪಂಚಮಿ(ನ.25) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ(ನ.26) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ.ಅಲ್ಲದೆ ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ. ಲಕ್ಷದೀಪೋತ್ಸವ(ನ.19), ಚೌತಿ(ನ.24), ಪಂಚಮಿ(ನ.25)ಚಂಪಾಷಷ್ಠಿ(ನ.26) ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ (ಡಿ.02)ದಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ.ನ.16ರಿಂದ ಡಿ.02ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.
ಇತರ ಸೇವೆಗಳು ಎಂದಿನಂತೆ:
 ಚಂಪಾಷಷ್ಠಿ ಜಾತ್ರೋತ್ಸವವು ನ.16ರಿಂದ ಡಿ.02ರ ತನಕ ನೆರವೇರಲಿದ್ದು ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ,ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶಗಳು ಇರುವುದಿಲ್ಲ.ಆದರೆ ಇತರ ದಿನಗಳಲ್ಲಿ ಆಶ್ಲೇಷಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ, ಉತ್ಸವ, ರಥೋತ್ಸವ ಮೊದಲಾದ ಸೇವೆಗಳು ನೆರವೇರಲಿದೆ.ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.02ರ ತನಕ ನೆರವೇರುವುದಿಲ್ಲ.

Post a Comment

Previous Post Next Post