ಸುಬ್ರಹ್ಮಣ್ಯ, ನವೆಂಬರ್ 5:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವಂತೆಯೇ, ಇಂದು ಸಂಜೆ ಸುಳ್ಯದ ಕುರುಂಜಿ ನಿವಾಸಿ ಡಾ. ರೇಣುಕ ಪ್ರಸಾದ್ ಅವರ ಕುಟುಂಬದಿಂದ ದೇಣಿಗೆಯಾಗಿ ನೀಡಲಾದ ಎರಡು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿರಥವು ವೈಭವಪೂರ್ಣ ಮೆರವಣಿಗೆಯೊಂದಿಗೆ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿತು.
ಕುರುಂಜಿಯಿಂದ ಪ್ರಾರಂಭವಾದ ಈ ಪವಿತ್ರ ರಥಯಾತ್ರೆಯು ಮಾರ್ಗಮಧ್ಯೆ ಅನೇಕ ಸ್ಥಳಗಳಲ್ಲಿ ಭಕ್ತರ ಹರ್ಷೋದ್ಗಾರ, ನಾದಸ್ವರ ವಾದ್ಯಮೇಳ ಹಾಗೂ ಭಕ್ತಿ ಗೀತೆಗಳ ಸಾಥ್‌ನೊಂದಿಗೆ ಸಾಗಿದ್ದು, ಕುಕ್ಕೆ ತಲುಪುವ ವೇಳೆಗೆ ಸರ್ವತ ಭಕ್ತಿಯ ವಾತಾವರಣ ಆವರಿಸಿತ್ತು.
ರಥದ ಆಗಮನದ ಸಂದರ್ಭದಲ್ಲಿ ಕುರುಂಜಿಯ ಡಾ. ರೇಣುಕ ಪ್ರಸಾದ್ ಹಾಗೂ ಅವರ ಕುಟುಂಬ ಸದಸ್ಯರು, ರಥಶಿಲ್ಪಿಗಳು, ಸುಳ್ಯ ಕೆ.ವಿ.ಜಿ. ವಿದ್ಯಾಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಜೊತೆಗೆ ಊರ ಮತ್ತು ಪರುರದ ಅನೇಕ ಭಕ್ತಾಭಿಮಾನಿಗಳು ಹಾಜರಿದ್ದರು.
ದೇವಳದ ಪರವಾಗಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರು ,ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ, ಮಾಸ್ಟರ್ ಪ್ಲಾನ್ ಸದಸ್ಯರು, ಅರ್ಚಕ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಭಕ್ತಿ ಭಾವಪೂರ್ಣ ಸ್ವಾಗತ ಕೋರಿದರು.
ಬೆಳ್ಳಿಯಿಂದ ನಿರ್ಮಿತ ಈ ಅಲಂಕೃತ ರಥವು ಕಲಾತ್ಮಕ ಶಿಲ್ಪಕೃತಿಯ ಅದ್ಭುತ ಉದಾಹರಣೆಯಾಗಿದ್ದು, ಭವಿಷ್ಯದಲ್ಲಿ ನಡೆಯುವ ವಿವಿಧ ದೇವರ ಜಾತ್ರಾ ಮಹೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದು ಭಕ್ತರ ಆಶಯ.
ದೇವರ ಸೇವೆಯೆ ಧ್ಯೇಯವಾಗಿಸಿಕೊಂಡ ಡಾ. ರೇಣುಕ ಪ್ರಸಾದ್ ಕುಟುಂಬದ ಈ ಮಹಾದಾನವು ದೇವಾಲಯದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
إرسال تعليق