📢 ಸೈಬರ್‌ ವಂಚನೆ ಪ್ರಕರಣದಲ್ಲಿ ಒಬ್ಬ ಆರೋಪಿಯ ಬಂಧನ – ದಕ್ಷಿಣ ಕನ್ನಡ ಸೈಬರ್‌ ಪೊಲೀಸ್ ಠಾಣೆಯ ಯಶಸ್ವಿ ಕಾರ್ಯಾಚರಣೆ.

ಮಂಗಳೂರು :ಇನ್ಸ್ಟಾಗ್ರಾಮ್‌ನಲ್ಲಿ “ತಕ್ಷಣ ಪೂಜೆ ಮಾಡಿ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ” ನೀಡುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು ರೂ 24,78,274/- ವಂಚಿಸಿದ ಸೈಬರ್‌ ಅಪರಾಧ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.

ಈ ಪ್ರಕರಣ ಅ.ಕ್ರ. 87/2025, U/S 66(D) IT Act ಹಾಗೂ 318(4) BNS ಅಡಿ ದಾಖಲಾಗಿದ್ದು, ತನಿಖೆಯ ವೇಳೆ ಆರೋಪಿಯ ಗುರುತು ಪತ್ತೆ ಹಚ್ಚಿ, ದಿನಾಂಕ 04-11-2025 ರಂದು ವಾಸುದೇವ ಆರ್‌ (32), ವಿಳಾಸ: ಗೋಕುಲ 1ನೇ ಹಂತ, ಯಶವಂತಪುರ, ಬೆಂಗಳೂರು (ಹಾಲಿ ವಿಳಾಸ: ಶ್ರೀನಿವಾಸನಗರ, ಸುಂಕದಕಟ್ಟೆ, ಬೆಂಗಳೂರು) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಪೊಲೀಸರು ಆರೋಪಿ ವಾಸುದೇವನಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಮೊಬೈಲ್‌ ಫೋನ್‌ಗಳು, ಮತ್ತು ರೂ. 20,300/- ನಗದು ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,60,300/- ಆಗಿದೆ.

ಬಂಧಿತನನ್ನು ದಿನಾಂಕ 05-11-2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದಕ್ಷಿಣ ಕನ್ನಡ ಸೈಬರ್‌ ಅಪರಾಧ ಠಾಣೆಯ ತಂಡದ ಈ ಶೀಘ್ರ ಕ್ರಮವು ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಸೈಬರ್‌ ವಂಚನೆಗಳ ವಿರುದ್ಧ ಬಲವಾದ ಎಚ್ಚರಿಕೆಯಾಗಿದೆ.

ಪೊಲೀಸರು ಸಾರ್ವಜನಿಕರಿಗೆ ಕರೆ ನೀಡಿದ್ದು, ಇಂತಹ ಭರವಸೆಗಳ ಜಾಹೀರಾತುಗಳಿಗೆ ನಂಬಿಕೆ ಇಡಬಾರದು, ಅನುಮಾನಾಸ್ಪದ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

Post a Comment

Previous Post Next Post