ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಪಸ್ಯಾ.ಎಸ್.ನಾಯಕ್ ರಾಷ್ಟ್ರ ಮಟ್ಟದ 69ನೇ ನೆಟ್‌ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದೇಶದ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯಿಂದ ಗ್ರಾಮೀಣ ಪ್ರದೇಶವಾದ ಕುಕ್ಕೆಗೆ ಹೆಮ್ಮೆಯ ಕಿರೀಟ ತಲೆಯೇರುವಂತಾಗಿದೆ.
ಕರ್ನಾಟಕ ತಂಡವು ಫೈನಲ್ ಪಂದ್ಯದಲ್ಲಿ ಕೇರಳವನ್ನು 4 ಅಂಕಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಕಾದಿರಿಸಿಕೊಂಡಿತು. ಈ ಗೆಲುವಿನ ತಂಡದಲ್ಲಿ ಕುಕ್ಕೆ ಪ್ರದೇಶದ ವಿದ್ಯಾರ್ಥಿನಿಯಾದ ತಪಸ್ಯಾ ಕೂಡ ಭಾಗಿಯಾಗಿದ್ದು, ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದಿಂದ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ.
ತಪಸ್ಯಾ ಅವರು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ ಅವರ ಪುತ್ರಿ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಅಭಿನಂದಿಸಿದ್ದಾರೆ.
ಭವ್ಯ ಮೆರವಣಿಗೆಗೆ ತಯಾರಿ
ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಕರ್ನಾಟಕ ತಂಡದ ಸದಸ್ಯರು ಒಂದು ವಾರಗಳ ವಿಶೇಷ ತರಬೇತಿಯನ್ನು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪಡೆದಿದ್ದರು. ಇದೇ ಹಿನ್ನೆಲೆಯಲ್ಲಿ ರಾಜ್ಯ ಗೆಲುವಿಗೆ ಪಾತ್ರರಾದ ತಂಡ ಹಾಗೂ ವಿದ್ಯಾರ್ಥಿನಿ ತಪಸ್ಯಾ ಅವರಿಗೆ ಗೌರವ ಸೂಚಕವಾಗಿ ಭವ್ಯ ಮೆರವಣಿಗೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ–ರಕ್ಷಕ ಸಂಘ ಸಿದ್ಧತೆ ನಡೆಸಿದೆ.
إرسال تعليق