ಕಡಬದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ — “ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ” ಎಚ್ಚರಿಕೆ ಡಾ. ಸಿ.ಕೆ. ಶಾಸ್ತ್ರಿಯಿಂದ.

ಕಡಬ, ಡಿ.28:ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಡಬದ ಹಿರಿಯ ವೈದ್ಯರಾದ ಡಾ. ಸಿ.ಕೆ. ಶಾಸ್ತ್ರಿ ಅವರು ಕರೆ ನೀಡಿದರು. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಅವರ ಸಹಯೋಗದೊಂದಿಗೆ ಭಾನುವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ನಡೆದ ಉಚಿತ ಶ್ರವಣ ತಪಾಸಣೆ ಶಿಬಿರ ಮತ್ತು ಶ್ರವಣ ಯಂತ್ರ ಸಹಾಯ ಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿಯೇ ಶ್ರವಣ ದೋಷಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಶ್ರವಣ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿರುವುದರಿಂದ ಜನರು ಅವುಗಳ ಸದುಪಯೋಗ ಪಡೆಯಬೇಕು ಎಂದು ಅವರು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯ ಸಂಚಾಲಕ ಲವ ಬಂಗೇರ ಅವರು, ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಇದು 68ನೇ ಶಿಬಿರವಾಗಿದ್ದು, ಇಂತಹ ಶಿಬಿರಗಳಿಂದ ಸಾವಿರಾರು ಜನರಿಗೆ ಪ್ರಯೋಜನವಾಗುತ್ತಿದೆ ಎಂದು ಹೇಳಿದರು. ಶ್ರವಣ ಸಮಸ್ಯೆಗೆ ಸಂಬಂಧಿಸಿದ ಶಿಬಿರಗಳು ವಿರಳವಾಗಿದ್ದು, ಪತ್ರಕರ್ತರ ಸಂಘದ ಸಹಕಾರದಿಂದ ದ.ಕ ಜಿಲ್ಲೆಯಾದ್ಯಂತ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅವರು ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಟೀಮ್ ಈಶ್ವರ್ ಮಲ್ಪೆ ತಂಡದ ವೈದ್ಯಾಧಿಕಾರಿಗಳಾದ ಡಾ. ಪವನ್, ಡಾ. ಉದಯನ್, ಕಡಬ ತಾಲೂಕು ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯಿಲ ಉಪಸ್ಥಿತರಿದ್ದರು.
ನಿಯೋಜಿತ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು.

Post a Comment

أحدث أقدم