ಕುಕ್ಕೆ ಸುಬ್ರಹ್ಮಣ್ಯ ಭೇಟಿ ಮಾಡಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ.; ಮಲೆ ಕುಡಿಯ ಸಮುದಾಯಕ್ಕೆ ಸಮುದಾಯ ಭವನ ಭರವಸೆ.

ಸುಬ್ರಹ್ಮಣ್ಯ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಬೆಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಳದ ವತಿಯಿಂದ ವಿಶೇಷವಾಗಿ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು. ಇದೇ ವೇಳೆ ಸ್ಥಳೀಯ ಮಲೆ ಕುಡಿಯ ಸಮುದಾಯದ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಬಳಿಕ ಶ್ರೀಮತಿ ಪಲ್ಲವಿ ಜಿ. ಅವರು ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ಶಾಲೆಯ ಪುಟಾಣಿ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಸಮಯ ಕಳೆಯುತ್ತಾ ಅವರ ವಿದ್ಯಾಭ್ಯಾಸ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಆಸುಪಾಸಿನ ಮಲೆ ಕುಡಿಯ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಜನಾಂಗದ ಸಮಸ್ಯೆಗಳು, ಅಗತ್ಯಗಳು ಹಾಗೂ ಸೌಲಭ್ಯಗಳ ಕೊರತೆ ಕುರಿತು ವಿಚಾರಣೆ ನಡೆಸಿದರು. ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದರು. ವಿಶೇಷವಾಗಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಲೆ ಕುಡಿಯ ಜನಾಂಗಕ್ಕಾಗಿ ಶೀಘ್ರದಲ್ಲೇ ಸಮುದಾಯ ಭವನ ನಿರ್ಮಿಸುವ ಭರವಸೆಯನ್ನು ನೀಡಿದ್ದು, ಸಮುದಾಯದವರಲ್ಲಿ ಸಂತಸ ಮೂಡಿಸಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಲೆ ಕುಡಿಯಾ ಸಂಘದ ಉಪಾಧ್ಯಕ್ಷರು ಹಾಗೂ ಸುಬ್ರಹ್ಮಣ್ಯ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾಧವ ದೇವರಗದ್ದೆ, ಸಮುದಾಯದ ಪ್ರಮುಖರಾದ ಶಿವರಾಮ್ ಪರ್ವತ ಮುಖಿ, ಬೆಳ್ಯಪ್ಪ ಕುಲ್ಕುಂದ, ನಾರಾಯಣ ದೇವರಗದ್ದೆ, ಶ್ರೀಮತಿ ದಿವ್ಯಾ ಮಾಧವ, ಶಾಲಾ ಮೇಲ್ವಿಚಾರಕರಾದ ಬಸವರಾಜ್, ವಿಶೇಷ ಅಧಿಕಾರಿ ಆನಂದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post a Comment

أحدث أقدم