ಮಡಪ್ಪಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರಾದ ಶ್ರೀಮತಿ ಮೋಹಿನಿ ಯತೀಶ್ ಗೋಳ್ಯಾಡಿ ಅವರು ಕ್ಷೀರಾಸಂಜೀವಿನಿ ಯೋಜನೆಯ ದಶಮಾನೋತ್ಸವದ ಪ್ರಯುಕ್ತ ಜನವರಿ 17, 2026ರಂದು ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ನಡೆಯಲಿರುವ ಪ್ರಗತಿಪರ ಹೈನುಗಾರರ ಸಮಾವೇಶ ಹಾಗೂ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ನೀಡಲಾಗುವ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ.
ಹೈನುಗಾರಿಕೆಯಲ್ಲಿ ಸಾಧನೆಯ ಹಾದಿ ಸುಲಭವಿರಲಿಲ್ಲ. ಹಳದಿ ರೋಗದಿಂದ ಸುಮಾರು 2000 ಅಡಿಕೆ ಮರಗಳು ನಾಶವಾದ ಕಠಿಣ ಪರಿಸ್ಥಿತಿಯ ನಡುವೆಯೂ ಹೈನುಗಾರಿಕೆಯನ್ನು ಪರ್ಯಾಯ ಜೀವನೋಪಾಯವಾಗಿ ಸ್ವೀಕರಿಸಿ, ಶ್ರಮ, ನಿಷ್ಠೆ ಹಾಗೂ ಆಧುನಿಕ ಪದ್ಧತಿಗಳ ಮೂಲಕ ದಾಖಲೆ ಮಟ್ಟದ ಸಾಧನೆ ಮಾಡಿದ್ದಾರೆ.
ಈ ಸಾಧನೆಯ ಹಿಂದೆ ಪತಿ ಯತೀಶ್ ಅವರ ನಿರಂತರ ಬೆಂಬಲವೇ ಬೆನ್ನೆಲುಬಾಗಿದ್ದು, ಕುಟುಂಬದ ಸಹಕಾರದಿಂದ ಹೈನುಗಾರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಾಲು ಉತ್ಪಾದನೆ, ಜಾನುವಾರುಗಳ ಆರೈಕೆ ಹಾಗೂ ಸಹಕಾರಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ರೈತ ಸಮುದಾಯ, ಸಹಕಾರಿ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಶ್ರೀಮತಿ ಮೋಹಿನಿ ಯತೀಶ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
Post a Comment