*ಸಂಸ್ಮರಣೆ*
*ಜನ್ಮದಿನ 27-04-1931*
ಅವರದು 95ನೆಯ ಜನ್ಮದಿನೋತ್ಸವ. ಅವರು ಬದುಕಿರುತ್ತಿದ್ದರೆ ಈಗಲೂ ನಮಗೆ ಸ್ಪೂರ್ತಿಯ ಸೆಲೆಯಾಗಿರುತ್ತಿದ್ದರು.
ಅವರೊಡನೆ ದೀರ್ಘಕಾಲೀನ ಒಡನಾಟ ಇದ್ದವರಿಗೆ ಅವರಿನ್ನೂ ನಮ್ಮಿಂದ ದೂರವಾಗಿಲ್ಲವೆಂಬ ಜೀವ ಭಾವ ಅಂತರಂಗದಲ್ಲಿದೆ. ಇನ್ನೂ ನಮ್ಮ ಜೊತೆಗಿದ್ದಾರೆ ಎಂದೇ ತಿಳಿದಿರುವರು.
ಅವರದು ಸೂಜಿಗಲ್ಲಿನಂತಹ ವ್ಯಕ್ತಿತ್ವ. ಅವರ ಮಗು ಮನಸ್ಸು ಆಬಾಲವೃದ್ಧರನ್ನೂ ಸೆಳೆಯುವಂತಿತ್ತು. ನಿತ್ಯವೂ ಜನಜಂಗುಳಿಯ ನಡುವೆ ಇದ್ದಾಗ ಮಾತಿಗೆ ಸಿಗದೇ ಹೋದರೂ ಅವರ ಅಭಯ ಹಸ್ತ, ಮುಗ್ಧ ನಗು ಅಷ್ಟೇ ಸಾಕಿತ್ತು ಭಕ್ತರಿಗೆ. ಅದನ್ನು ಕಂಡೇ ಭಕ್ತರು ಆನಂದ ತುಂದಿಲರಾಗುತ್ತಿದ್ದರು. ಜನ್ಮ ಸಾರ್ಥಕವೆಂದು ತಿಳಿಯುತ್ತಿದ್ದರು.
ಗುರುಗಳು ಭೌತಿಕವಾಗಿ ನಮ್ಮೊಡನಿಲ್ಲದೇ ಹೋದರೂ ಅವರ ನೆನಪುಗಳ ಕಂಪು ಗಾಳಿಯಲ್ಲಿ ತೇಲಿ ತೇಲಿ ಬರುತ್ತಲೇ ಇದೆ. ಜನಸೇವೆ ಎಂಬ ಒಂದೇ ಸಿದ್ದಾಂತಕ್ಕೆ ಬದ್ಧವಾಗಿ, ಜೀವನಾನುಭವಗಳಿಗೆ ಇಡಿಯಾಗಿ ಸ್ಪಂದಿಸಿದ ಮುಕ್ತ ಮನಸ್ಸಿನ ಪ್ರಾಮಾಣಿಕ ದೃಷ್ಟಿ ಅವರದು. ಅವರಿಗೆ ಎಲ್ಲರೂ ಬೇಕಿತ್ತು. ಎಲ್ಲರಿಗೂ ಅವರು ಬೇಕಿತ್ತು. ರಾಮಕುಂಜದಂತಹ ಹಳ್ಳಿಯ ಪರಿಸರ ಇವರ ಬಾಲ್ಯ ರೂಪಿಸಿತು. ವಿಶ್ವಕ್ಕೆ ಉಪಯೋಗವಾಗುವಂತಹ ಹೆಮ್ಮರವಾಗಿ ಬೆಳೆದರು. ಹೇಗೆ ಬದುಕಬೇಕು ಎಂಬದಕ್ಕೆ ಅವರಿಗಿಂತ ಮಿಗಿಲಾದ ಆದರ್ಶತೆ ಪ್ರಸ್ತುತ ಕಾಲಮಾನದಲ್ಲಿಲ್ಲ . ಭಕ್ತರ ಹೃದಯದಲ್ಲಿ ಇಂದಿಗೂ ಅವರು ದೇವಮಾನವ. ನಮ್ಮ ಸಮಕಾಲೀನರಾಗಿ ಅವತಾರ ಪುರುಷನಂತೆ ಧರೆಗಿಳಿದರು. ಭಾವ ಪ್ರಪಂಚದ ಬೆರಗು ಆಧ್ಯಾತ್ಮಿಕ ಶಕ್ತಿ, ಸಾಂಸ್ಕೃತಿಕ ಶಕ್ತಿ ಎಂಬುದನ್ನು ತಿಳಿಹೇಳಿದರು.
ಜೀವನ ಜಂಜಾಟಗಳಿಗೆ ಕಹಿಯಾಗದೆ, ತನ್ನ ಸುತ್ತಲ ಕಪಟ -ಕ್ರೌರ್ಯ -ಸ್ವಾರ್ಥ - ದುರಾಸೆಗಳಿಂದ ರೋಸಿ ಸಿನಿಕನಾಗದೆ, ಇಂತಹ ಪರಿಸರದಲ್ಲೂ ಅಲ್ಲಲ್ಲಿ ವಿರಳವಾಗಿ ಉಳಿದ ಚೆಲುವು- ಗೆಲುವುಗಳನ್ನು, ಪ್ರೀತಿ ಅಂತ:ಕರಣಗಳನ್ನು, ಮನುಷ್ಯನ ಘನತೆಗಳನ್ನು ಗುರುತಿಸಿ ಮುನ್ನೆಲೆಗೆ ತಂದಿಟ್ಟ ಅದಮ್ಯ ಆಶಾವಾದಿಯಾಗಿದ್ದರು.
ಮೌನದಲ್ಲಿ ಕೂತು ಸಂತನಾಗುವುದಕ್ಕಿಂತ, ಲೋಕದ ಸಂತೆಯಲ್ಲಿ ತಿರುಗುತ್ತಾ ತಿರುಗುತ್ತಾ ಸಂತನಾದರು. ದೇಶದ ಮೂಲೆ ಮೂಲೆಗೂ ಸಂಚರಿಸಿ ಮೇರು ಸದೃಶ ಸಂತರೆನಿಸಿಕೊಂಡರು. ಸಮಾಜ ವಿಜ್ಞಾನಿಯಾದರು. ಈ ಸಮಾಜಕ್ಕೆ ಏನನ್ನು ಕೊಡಬೇಕೆಂದು ತಿಳಿದಿದ್ದರು. ಜನಮಾನಸದ ನಾಡಿಮಿಡಿತ ಅರಿತ ಮನ:ಶಾಸ್ತ್ರಜ್ಞರಾದರು. ಎಲ್ಲಾ ಗೆಲುವುಗಳಿಗಿಂತ ಮಿಗಿಲು ಮನದ ಗೆಲುವು ಎಂಬುದಕ್ಕೆ ರೂಪಕವಾದರು.
ಮಾತಿಗೆ ಮಮತೆ ಬೆರೆಸಿ ಘನತೆ ಹೆಚ್ಚಿಸಿಕೊಂಡರು. ಎಲ್ಲ ಜೀವಿಗಳನ್ನು ಪ್ರೀತಿಯಿಂದ ಕಂಡು ಹೃದಯ ಸಿಂಹಾಸನದ ಪೀಠಾಧಿಪತಿಯೂ ಆದರು. ಮನುಷ್ಯತ್ವಕ್ಕೆ ದೈವತ್ವ ಬೆರೆಸಿದರು. ಸಂಪತ್ತಿಗೆ ಸರಳತೆ ತುಂಬಿದರು. ಹಣವಂತರಿಗೆ ಗುಣವಂತಿಕೆ ಕಲಿಸಿದರು. ಸಂಬಂಧಗಳಿಗೆ ಸೌಹಾರ್ದತೆ ತಂದಿತ್ತರು. ಶಿಕ್ಷಣಕ್ಕೆ ಸಂಸ್ಕಾರವಿತ್ತರು.ಸುಶಿಕ್ಷಿತರನ್ನು ಸಂಸ್ಕಾರವಂತನ್ನಾಗಿಸಿದರು. ವಿದ್ಯೆಗೆ ವಿನಯ ಬೆರೆಸಿದರು. ವೈಜ್ಞಾನಿಕತೆಗೆ ವೈಚಾರಿಕತೆಯಿತ್ತರು. ಮನುಷ್ಯ ಚಿನ್ನವಾದರೆ ವ್ಯಕ್ತಿತ್ವ ಆಭರಣವೆಂದು ತಿಳಿಹೇಳಿದರು. ಅಧಿಕಾರಕ್ಕೆ ಅನುಕಂಪ ಬೆರೆಸಿದರು. ಆಧುನಿಕತೆಗೆ ಆಧ್ಯಾತ್ಮಿಕತೆ ಬೇಕೆಂದರು. ನಮ್ಮ ಬದುಕಿನ ಭಾಗವಾಗಿ ಸುಖ ದುಃಖಗಳ ಬಾಗಿಯಾಗಿಯೂ ಬದುಕು ಮುಗಿಸಿದರು.
ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸು ಎಂದು ಕಲಿಸಿದರು . ಬಾಹ್ಯ ಸೌಂದರ್ಯಕ್ಕೆ ಆಂತರಿಕ ಸೌಂದರ್ಯ ಶೋಭೆ ಎಂದರು. ಉಣ್ಣುವ ಆಹಾರವೇ ಮುಖ್ಯವಲ್ಲ ವ್ಯವಹಾರ ಮುಖ್ಯ ಎಂದರು. ಏನು ನುಡಿದನೆಂಬುದು ಮುಖ್ಯವಲ್ಲ, ನಡೆದನೆಂಬುದು ಮುಖ್ಯ ಎಂದು ತೋರಿದರು. ಮಿಕ್ಕದ್ದು ಕೊಡಬೇಡ ಮಿಗಿಸಿ ಕೊಡು ಅಂದರು. ಅವರು ವ್ಯಕ್ತಿ ಸ್ವರೂಪವಲ್ಲ ಶಕ್ತಿ ಸ್ವರೂಪವಾದರು. ಭೀತಿವಾದಕ್ಕಿತ ಪ್ರೀತಿವಾದ ಮೇಲು ಎಂದರು.
ನನ್ನಿಂದಲೇ ಎಲ್ಲವೂ ಎಂಬ ಭಾವ ಒಂದು ದಿನವೂ ಅವರಲ್ಲಿರಲಿಲ್ಲ. ಈ ಪ್ರಪಂಚ ನಮಗಿಂತ ಮೊದಲೂ ಇತ್ತು, ನಮ್ಮ ನಂತರವೂ ಇರುತ್ತದೆ ಎಂಬುದನ್ನು ಬಲವಾಗಿ ನಂಬಿದ್ದರು. ಭಗವಂತನಲ್ಲಿ ಅಂತರಂಗದ ಸಂಭಾಷಣೆ ನಡೆಸುವುದು ಅವರಿಗೆ ತಿಳಿದಿತ್ತು.
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂದು ತೋರಿದ ನಮ್ಮ ಮನದೈವ ಅವರಾದರು. ಅವರ ಮರೆಯುವುದುಂಟೆ, ಮರೆಯಲಿ ನಿಂತೇ ಕಾಯುವ ಆ ಗುರು ದೇವರ.
*ಟಿ ನಾರಾಯಣ ಭಟ್ ರಾಮಕುಂಜ*
Post a Comment