ಇಹ ಸುಖಗಳ ಮೀರಿ ನಿಂತು,-ಬದುಕು ಮುಗಿಸಿದ ನಮ್ಮ ನೆಚ್ಚಿನ-ಶ್ರೀಮತಿ ಮಂದಾಕಿನಿ ಅಮ್ಮ.

           ಶ್ರೀಮತಿ ಮಂದಾಕಿನಿ ಅಮ್ಮ.
        ನುಡಿ ತರ್ಪಣ
ಅವರು ಸಂಸಾರಿ.ಆದರೆ ಅವರದು ಸನ್ಯಾಸ ಭಾವ. ಒಂದಿನಿತೂ ಅಪೇಕ್ಷೆ- ನಿರೀಕ್ಷೆಗಳಿಲ್ಲದ ಮುಗ್ದ ಮನಸ್ಸು. ದ್ವೇಷಿಸುವುದು ಸುಲಭ, ಪ್ರೀತಿಸುವುದು ಕಷ್ಟ ಎಂದು ಅನುಭವಿಗಳು ಹೇಳುವರು.ಆದರೆ ಇವರಿಗೆ ಪ್ರೀತಿಸುವುದು ಸುಲಭ, ದ್ವೇಷಿಸುವುದೆಂದರೇನೆಂದೇ ತಿಳಿಯದ ಮಹಾಮಾತೆ. ಮೌನದಲ್ಲಿ ಕುಳಿತು ಸಂತನಾಗುವುದಕ್ಕಿಂತ, ಸಂತೆಯಲ್ಲಿ ತಿರುಗುತ್ತಾ ಸಂತನಾದರೆ ದೊಡ್ಡ ಜ್ಞಾನಿಯಂತೆ. ಹೌದು,ಇವರು ನಿತ್ಯವೂ ನೂರಾರು ಜನರ ನಡುವೆ ಇದ್ದು ಸಂತರಂತಿದ್ದವರು. ಬಡತನ ಬದುಕಲು ಕಲಿಸುತ್ತದೆ,ಸಿರಿತನ ಮರೆಸುತ್ತದೆ. ಇವರು ಬದುಕಲು ಕಲಿತವರು. ಮನೆ ಕಟ್ಟಲು ಇಟ್ಟಿಗೆ ಒಟ್ಟಿಗೆ ಇರಬೇಕು, ಮನೆ ನಡೆಸಲು ಮನಗಳು ಒಟ್ಟಿಗೆ ಇರಬೇಕಂತೆ. ಇವರು ಮನಗಳನ್ನು ಒಟ್ಟಿಗೆ ಬೆಸೆದ ಕುಶಲಕರ್ಮಿಯಾದರು. ಸಂಬಂಧ ಕಟ್ಟಿಕೊಳ್ಳಲು ಸೌಹಾರ್ದತೆ ಮುಖ್ಯವೆಂದು ತಿಳಿದಾಕೆ. ಇನ್ನೊಬ್ಬರ ಸಂತೋಷವೇ ತನ್ನ ಸಂತೋಷವೆಂದು ತಿಳಿದ ನಿರ್ಭಾವುಕರು. ಬದುಕಲ್ಲಿ ಅಲ್ಪಸಂತೋಷಿಯಾಗಿದ್ದು, ಅನಂತ ಸಂತೋಷಿಯಾದರು. ಬೋಧನೆ ತಿಳಿಯದ ಇವರು ಸಾಧನೆಗೆ ಹೆಸರಾದರು. ಹಾಸಿಗೆ ಇದ್ದಷ್ಟು ಕಾಲು ಚಾಚಿದರು. ಇಲ್ಲದೆ ಹೋದರೆ ಕೈ ಚಾಚ ಬೇಕೆಂದು ಅರಿತ ಸರಳ ಜೀವಿ. ಇವರು ಮತ್ತಾರು ಅಲ್ಲ 25 -30 ವರ್ಷಗಳ ಹಿಂದೆ ನಾವೆಲ್ಲ ಸುಬ್ರಹ್ಮಣ್ಯ ಮಠದಲ್ಲಿ ಕಂಡ ಹೂನಗೆಯ ಹೃದಯವಂತೆ ಶ್ರೀಮತಿ ಮಂದಾಕಿನಿ ಗೋವಿಂದಾಚಾರ್ಯರು.

 28 ವರ್ಷಗಳ ಕಾಲ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ, ದಾಸರ ಪದಗಳ ಶ್ರೇಷ್ಠ ಹಾಡುಗಾರ ಶ್ರೀ ವಿದ್ಯಾಭೂಷಣರ ಮಾತೃಶ್ರೀ ಈಕೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮಧ್ಯರಾತ್ರಿಯವರೆಗೆ ಮಠದ ಭೇಟಿಗೆ, ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದರೂ ಭಕ್ತರಿಗೆ ಊಟ ಉಪಚಾರವಿತ್ತು ಕಳುಹಿಸುವುದು ಧರ್ಮವೆಂದು ತಿಳಿದು ತನ್ನ ಸೊಸೆಯೊಡಗೂಡಿ ಬದುಕು ಸವೆಸಿದವರು. ಬಾಯಾರಿಕೆ ತಗೊಳ್ಳಿ, ಊಟಕ್ಕೆ ನಿಲ್ಲಿ, ಇನ್ನೊಮ್ಮೆ ಬನ್ನಿ ಎಂದು ಹೇಳದೆ ಹೋದರೆ ಪೀಠಾಧಿಪತಿಗಳಿಗೆ ಕಳಂಕ ಉಂಟಾದೀತೆಂದು ಭಾವಿಸಿ ಬದುಕಿದ ಮಹಿಮಾನ್ವಿತೆ. 

 ಅವರ ಮೃದು ಮಧುರ ಮಾತುಗಳು ಕೇಳಿದವರ ಕಿವಿಯಲ್ಲಿ ಇಂದಿಗೂ ಅನುರಣಿಸುತ್ತಿದೆಯಂತೆ. ಆದರ್ಶ ಗೃಹಿಣಿಯಲ್ಲಿ ಇರಬೇಕಾದ ತಾಳ್ಮೆ, ಸಂವೇದನಾಶೀಲತೆಗಳೇ ಇವರಿಗೆ ತಿಲಕ ಪ್ರಾಯವಾಗಿದ್ದವು. ಸಂಬಂಧಗಳು ಹಾಳಾಗುವುದು ಎರಡು ವಿಷಯಗಳಿಂದ. ಒಂದನೆಯದು ಹಕ್ಕು ಸ್ಥಾಪನೆಗೋಸ್ಕರ ಮಾತನಾಡಿದಾಗ. ಇನ್ನೊಂದು ಹದ್ದು ಮೀರಿ ಮಾತನಾಡಿದಾಗ. ಇವೆರಡರ ಲವಲೇಶವೂ ಇವರಲ್ಲಿರಲಿಲ್ಲ. ಮನುಷ್ಯನ ನಡೆ ನುಡಿಗಳೇ ವ್ಯಕ್ತಿತ್ವದ ದರ್ಪಣ. ಮನದಲ್ಲಿ ಏನಿರುವುದೋ ಅದೇ ಭಾವ ಚಹರೆಯಲ್ಲಂತೆ. ಇವರ ಸಂತೃಪ್ತ ಭಾವದ ನಿಷ್ಕಲ್ಮಶ ಮುಖಚಹರೆ ವ್ಯಕ್ತಿತ್ವದ ದರ್ಪಣದಂತಿತ್ತು. ಹರಿದ ಮನಸ್ಸುಗಳ ಹೊಲಿಯಲು ಈ ಜಗತ್ತಿನಲ್ಲಿ ಯಾವುದೇ ಸೂಜಿ ಇಲ್ಲ. ಇವರು ತನ್ನವರ ಮನಸ್ಸುಗಳನ್ನು ಹರಿಯಲು ಬಿಟ್ಟವರೇ ಅಲ್ಲ.

 ಇವರು ಪ್ರಪಂಚದ ಬಗ್ಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಪರಮಾತ್ಮನ ಬಗ್ಗೆ ತಲೆಕೆಡಿಸಿಕೊಂಡವರು. ಕಾಯಕವೇ ಕೈಲಾಸ, ಅತಿಥಿ ದೇವೋಭವ ಇವೆಲ್ಲವ ಸಾಕಾರಗೊಳಿಸಿ ಪರಮಾತ್ಮನ ಕಂಡರು. ಸೊಸೆಯರಿರಲಿ, ಮಗಳಂದಿರಿರಲಿ ಗುಲುಗುಂಜಿಯಷ್ಟು ಕೂಡ ಭೇದ ಭಾವ ತೋರಿದವರಲ್ಲ. ಅದರ ಅರಿವೇ ಅವರಿಗಿರಲಿಲ್ಲ. ಎಲ್ಲರನ್ನೂ ಸಂತೋಷ ಪಡಿಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಎಲ್ಲರೊಂದಿಗೆ ಸಂತೋಷವಾಗಿರುವುದು ಖಂಡಿತ ನನ್ನಿಂದ ಸಾಧ್ಯವೆಂದು ನಡೆದು ತೋರಿ ತುಂಬು ಬದುಕು ಬಾಳಿ ಮರೆಯಾದವರು.

 ಮಂದಾಕಿನಿ ಅಮ್ಮನವರ ಪತಿ ಗೋವಿಂದಾಚಾರ್ಯರು ಬಹಳ ಹಿಂದೆಯೇ ಇಹಲೋಕ ತ್ಯಜಿಸಿರುವರು. ಅವರು ಪರೋಪಕಾರಿಯಾಗಿ ಬದುಕಿದ ಜೀವ. ಸಂಗೀತ - ನಾಟಕ ಸಂತಸಕ್ಕಾಗಿ ಪ್ರವೃತ್ತಿಯಾಗಿತ್ತು. ಸುಬ್ರಹ್ಮಣ್ಯ ಮಠದ ದಿವಾನರಾಗಿ ದಾನ ಧರ್ಮಾದಿ ಕಾರ್ಯಗಳು ನಿರಂತರ ಸಾಗಲು ತಮ್ಮ ಬದುಕನ್ನೇ ಒತ್ತೆಯಿಟ್ಟ ದಂಪತಿಗಳಿವರು. ಮೈತುಂಬ ಒಡವೆ- ಒಡ್ಯಾಣವಿರಲೆಂದು ಒಂದು ದಿನವೂ ಆಸೆ ಪಟ್ಟವರಲ್ಲ. ಇರುವುದೆಲ್ಲವ ಗಂಡನ ಕೈಗಿತ್ತು, ಕಷ್ಟಕಾರ್ಪಣ್ಯಗಳ ವ್ಯವಹಾರಕ್ಕೆ ಬಳಸಿದರು. ಕೈಗೆ ಬಂದಾಗ ತನ್ನವರಿಗೆ ಹಂಚಿ ಸಂಭ್ರಮಿಸಿದರು. ಬದುಕೆಲ್ಲ ನಿರಾಭರಣ ಸುಂದರಿಯಾಗಿ ಮುಖಕ್ಕೆ ಮಂದಹಾಸ ಬೆರೆಸಿ ಬದುಕಿದವರು ಮಂದಾಕಿನಿ ಅಮ್ಮ. ಮಾತಿಗೆ ಮಮತೆ ಬೆರೆಸಿ ಘನತೆ ಹೆಚ್ಚಿಸಿಕೊಂಡರು. ಮನುಷ್ಯತ್ವಕ್ಕೆ ದೈವತ್ವ ಬೆರೆಸಿ ದೇವತೆಯಂತೆ ಕಂಗೊಳಿಸಿದರು. ಬಾಹ್ಯ ಸೌಂದರ್ಯಕ್ಕೆ ಅಂತರಂಗದ ಸೌಂದರ್ಯ ಭೂಷಣವಾಯಿತು. ಸಂಗೀತ ಸಾರ್ವಭೌಮ ವಿದ್ಯಾಭೂಷಣರ ಮಾತೆಯಾದ ಇವರು ಎಲ್ಲರಿಗೂ ಇಷ್ಟವಾದರು. 

 ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು. ಇದಕ್ಕೆ ಇವರೂ ಹೊರತಲ್ಲ. ತನ್ನ ತೊಂಬತ್ತೆರಡನೆಯ ವಯಸ್ಸಲ್ಲಿ ಜೀವನ ಪಯಣ ನಿಲ್ಲಿಸಿ ಹೊರಟೇ ಹೋದರು. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಬದುಕಿನ ಎಲ್ಲಾ ತಲ್ಲಣಗಳ ಕಂಡರೂ,ಪರರ ದೂಷಿಸದೆ ಒಳ್ಳೆಯತನವನ್ನೇ ಹುಡುಕಿ ಹುಡುಕಿ ಹಿಡಿದೆತ್ತಿ ತೋರಿದ ಇವರ ಬದುಕು ತೆರೆದ ಪುಸ್ತಕದಂತೆ ಇತ್ತು. ಕಲಿಯಬೇಕೆಂಬವರಿಗೆ ಅಧ್ಯಯನ ಯೋಗ್ಯ ಬದುಕು ಇವರದಾಯಿತು. 

ತಂದೆ ತಾಯಿಯರ ಕೆಲಸಗಳನ್ನು ಮಕ್ಕಳು ಅನುಸರಿಸುತ್ತಾರೆ ವಿನಃ ಉಪದೇಶವನ್ನಲ್ಲ. ಈ ಮಾತಿಗೆ ತಕ್ಕಂತಿದೆ ಇವರ ಕುಟುಂಬ. ಗೋವಿಂದಾಚಾರ್ಯ ಮಂದಾಕಿನಿ ಅಮ್ಮರದು ತುಂಬಿದ ಸಂಸಾರ. ಸಂಗೀತ ಗಾರುಡಿಗ ಅಭಿನವ ಪುರಂದರ ದಾಸರೆಂದೇ ಜನರಾಡಿಕೊಳ್ಳುತ್ತಿರುವ ವಿದ್ಯಾಭೂಷಣರನ್ನು ಈ ಜಗತ್ತಿಗೆ ಕೊಟ್ಟ ಪುಣ್ಯವತಿ ಮಹಾತಾಯಿ. ಮಠ- ಮಾನ್ಯ ಸಂಸ್ಕಾರ - ಸಂಸ್ಕೃತಿಗಳೆಂದು ಟೊಂಕ ಕಟ್ಟಿ ದುಡಿದ ವೇಣುಗೋಪಾಲ ಆಚಾರ್ಯರನ್ನು ಹಡೆದಮ್ಮ ಇವರು. ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ, ಅದೇನೆ ಬಂದರು ಅವನ ಕಾಣಿಕೆ ಎಂದು ನಿಗರ್ವಿಯಾದ ಮುರಳೀಧರ ಆಚಾರ್ಯರನ್ನು ಹೆತ್ತಾಕೆ. ವಾರಿಜ, ಚಂದ್ರಿಕಾ, ನಾಗಮಣಿ, ಗಾಯತ್ರಿ ಎಂಬ ಸಂಸಾರದ ಕಣ್ಣಿನಂತಿರುವ ನಾಲ್ಕು ಹೆಣ್ಣು ಮಕ್ಕಳನ್ನು ಅಂತರಂಗದ ಅರಿವಿನ ಮಹಾ ಬೆಳಕಲ್ಲಿ ಬೆಳೆಸಿದರು. ಅಳಿಯಂದಿರು,ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ತುಂಬು ಸುಖಿ ಸಂಸಾರಕ್ಕೆ ಮಾದರಿಯಾಗಿ ಬದುಕು ಮುಗಿಸಿದ ಆದರ್ಶ ಮಾತೆಯ ನೆನಪುಗಳ ನೇವರಿಸುವುದು ನಮ್ಮ ಬದುಕಿಗೂ ತಂಗಾಳಿಯಂತೆ ಹಿತವಾಗಬಲ್ಲದು. 

 ಇವರ ಹುಟ್ಟೂರು ಸೀತೂರು. ಗಣಪತಿ ಉಪಾಧ್ಯಾಯ - ಮೀನಾಕ್ಷಿ ಅಮ್ಮನವರ ಸುಪುತ್ರಿ ಇವರು.

 *ಟಿ ನಾರಾಯಣ ಭಟ್ ರಾಮಕುಂಜ*

Post a Comment

أحدث أقدم