ಬಾಲಕಾರ್ಮಿಕರ ರಕ್ಷಣೆಗಾಗಿ ಓಡೋಡಿ ಬಂದ ಅಧಿಕಾರಿಗಳು.

ಕಡಬ; ಸಾರ್ವಜನಿಕ ಸ್ಥಳವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಪ್ರಾಪ್ತ ಬಾಲ ಕಾರ್ಮಿಕರಿಬ್ಬರನ್ನು  ಮಕ್ಕಳ ಕಲ್ಯಾಣ ಸಮಿತಿಯ ಸಹಕಾರದೊಂದಿಗೆ ಸ್ಥಳೀಯ ಪೊಲೀಸರು ರಕ್ಷಿಸಿದ ಘಟನೆ  ಮಾ.17 ರಂದು ಕಡಬದಲ್ಲಿ ನಡೆದಿದೆ.

ಕಡಬ ಪಟ್ಟಣ ಪ.ಪಂ ವ್ಯಾಪ್ತಿಯ ಹಳೆಸ್ಟೇಷನ್ ಬಳಿ ಗುತ್ತಿಗೆ ಪಡೆದುಕೊಂಡು ಖಾಸಗಿ ಕಂಪೆನಿಯ ಜಾಹೀರಾತಿಗೆ  ಬಣ್ಣ ಹಚ್ಚುತ್ತಿದ್ದ ತಂಡದಲ್ಲಿ  ಈ ಅಪ್ರಾಪ್ತ ಕಾರ್ಮಿಕರು ಇರುವುದು ಬೆಳಕಿಗೆ ಬಂದಿತ್ತು. ಡಿಜಿಟಲ್ ಮೀಡಿಯಾದ  ಪತ್ರಕರ್ತರು ಹೋಟೆಲ್ ಒಂದರಲ್ಲಿ  ಊಟಕ್ಕೆ ಬಂದ  ಇಬ್ಬರನ್ನು ಗಮನಿಸಿ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದರು.

ದ.ಕ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಡಾ. ಅಕ್ಷತಾ ಆದರ್ಶ ಅವರ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದ್ದು ಅದರಂತೆ  112 ಸಿಬ್ಬಂದಿಗಳು ಬಂದು ರಕ್ಷಣೆಗೆ ಮುಂದಾಗಿದ್ದಾರೆ.  ಪೊಲೀಸರ ವಿಚಾರಣೆ ವೇಳೆ ಗೋಡೆಗಳ ಮೇಲೆ ಖಾಸಗಿ ಕಂಪನಿಗಳ ಜಾಹೀರಾತು ಡಿಸೈನ್ ಮಾಡಿ ಅದಕ್ಕೆ ಬಣ್ಣ ಹಚ್ಚುವ ಕೆಲಸ ಕಳೆದ  ಒಂದು ತಿಂಗಳಿನಿಂದ  ಮಾಡುತ್ತಿರುವುದನ್ನು ವಿವರಿಸಿದಾರೆ.ಅಲ್ಲದೆ ಅಪ್ರಾಪ್ತ ಕಾರ್ಮಿಕರು ಹಾಸನ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಕೆಲಸದ ಸ್ಥಳದಿಂದ ಇಬ್ಬರನ್ನು ರಕ್ಷಿಸಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದು ಹೆತ್ತವರಿಗೆ ಮಾಹಿತಿ ,ತಿಳುವಳಿಕೆ ನೀಡಿ ಅಲ್ಲದೆ ದುಡಿಸಿಕೊಂಡ ಗುತ್ತಿಗೆದಾರರಿಗೂ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

ಮಕ್ಕಳ ರಕ್ಷಣೆ ಮತ್ತು ಪೋಷಣೆ ಪ್ರತಿಯೊಬ್ಬ ನಾಗರಿಕನ ಜವಬ್ದಾರಿಯಾಗಿದೆ.ಈ ನಿಟ್ಟಿನಲ್ಲಿ ಡಿಜಿಟಲ್ ಮಾಧ್ಯಮದವರ ಕಾಳಜಿ ಶ್ಲಾಘನೀಯ.ನಗರ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಕೂಡಲೇ ಮಕ್ಕಳಾ ರಕ್ಷಣಾ ಘಟಕ ಅಥವಾ ಮಕ್ಕಳ ಕಲ್ಯಾಣ ಸಮಿತಿ ಇಲ್ಲವೆ ಮಕ್ಕಳ ಸಹಾಯವಾಣಿ 1098  ಸಂಖ್ಯೆ,ಪೊಲೀಸ್ ತುರ್ತು ಸಹಾಯವಾಣಿ 112   ಯನ್ನು ಸಂಪರ್ಕಿಸಬಹುದಾಗಿದೆ- ಡಾ. ಅಕ್ಷತಾ ಆದರ್ಶ, ಅಧ್ಯಕ್ಷರು,  ಮಕ್ಕಳ ಕಲ್ಯಾಣ ಸಮಿತಿ,ದಕ್ಷಿಣ ಕನ್ನಡ ಜಿಲ್ಲೆ

Post a Comment

أحدث أقدم