ಕುಂದಾಪುರ: ಧಾರ್ಮಿಕ ಶ್ರದ್ಧೆಯ ಮಹಾನ್ ಪ್ರತೀಕವಾಗಿ ಶ್ರೀ ಕ್ಷೇತ್ರ ಬೋಳಂಬಳ್ಳಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ಮಹಾಮಜ್ಜನ ಮಹೋತ್ಸವವು ಮೇ 4ರಿಂದ 9ರವರೆಗೆ ಅದ್ಧೂರಿಯಾಗಿ ನಡೆಯಲಿದೆ.
ಈ ಮಹೋತ್ಸವದಲ್ಲಿ ಆಚಾರ್ಯ ಶ್ರೀ 108 ಗುಲಾಬಭೂಷಣ ಮುನಿಮಹಾರಾಜರ ಸಾನಿಧ್ಯ ಮತ್ತು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನವಿರಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶಯದೊಂದಿಗೆ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ಅವರ ನೇತೃತ್ವದಲ್ಲಿ ಜೈನ ಪರಂಪರೆಯ ಶಾಸ್ತ್ರೋಕ್ತ ವಿಧಿ-ವಿಧಾನಗಳು ನೆರವೇರಲಿವೆ.
ಪ್ರಮುಖ ಪೂಜಾ ಕಾರ್ಯಕ್ರಮಗಳು ಹೀಗಿವೆ:
ಮೇ 4: ಇಂದ್ರಪ್ರತಿಷ್ಠೆ, ಧ್ವಜಾರೋಹಣ, ಮಹಾಮಂಗಳಾರತಿ
ಮೇ 5: ಶ್ರೀಪೀಠ ಯಂತ್ರಾರಾಧನೆ, ನವಕಲಶ ಅಭಿಷೇಕ
ಮೇ 6: 24 ತೀರ್ಥಂಕರರ ಆರಾಧನೆ, ಗರ್ಭಾವತರಣ ಕಲ್ಯಾಣ
ಮೇ 7: ಜನ್ಮಕಲ್ಯಾಣ, ದೀಕ್ಷಾವಿಧಿ, ನವಕಲಶ ಅಭಿಷೇಕ
ಮೇ 8: ಕೇವಲಜ್ಞಾನಕಲ್ಯಾಣ, ಮಹಾಮಸ್ತಕಾಭಿಷೇಕ
ಮೇ 9: ರಥಾರೋಹಣ, ಪಾದಪೂಜೆ, ಮೂರ್ತಿ ಲೋಕಾರ್ಪಣೆ
ಪ್ರತಿದಿನವೂ ಸಂಜೆ ಧಾರ್ಮಿಕ ಸಭೆಗಳು ನಡೆಯಲಿದ್ದು, ವಿವಿಧ ಮಠಾಧೀಶರು ಹಾಗೂ ವಿದ್ವಾಂಸರ ಪ್ರವಚನಗಳು ಭಕ್ತರಿಗೆ ಧಾರ್ಮಿಕ ಹಾಗೂ ತಾತ್ವಿಕ ಪಾಠ ನೀಡಲಿವೆ. ಮೇ 9ರಂದು ಸಂಜೆ 3 ಗಂಟೆಗೆ ಶ್ರೀ ಬಾಹುಬಲಿ ಹಾಗೂ ಕೇವಲಿ ಸಿದ್ಧ ಭಗವಾನ್ ಶ್ರೀರಾಮ ಮೂರ್ತಿಯ ಲೋಕಾರ್ಪಣೆಯನ್ನು ಡಾ. ವೀರೇಂದ್ರ ಹೆಗ್ಗಡೆ ನೆರವೇರಿಸಲಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಅನುಭವ ಪಡೆದುಕೊಳ್ಳಬೇಕೆಂದು ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment