ಸುಬ್ರಹ್ಮಣ್ಯ ರೋಡ್, ಏಪ್ರಿಲ್ 12: ಮಂಗಳೂರು ಸೆಂಟ್ರಲ್ ನಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ನೇರ ಸಂಪರ್ಕ ಕಲ್ಪಿಸುವ ನೂತನ ಪ್ಯಾಸೆಂಜರ್ ರೈಲು ಇಂದು ಚುಕ್ಕಾಣಿ ಹಿಡಿದಿದ್ದು, ಸ್ಥಳೀಯರು ಅದನ್ನು ಭಾವನಾತ್ಮಕ ಹಾಗೂ ಸಾಂಸ್ಕೃತಿಕ ರೀತಿಯಲ್ಲಿ ಸ್ವಾಗತಿಸಿದರು. ಚಂಡೆ ವಾದ್ಯಗಳ ಘೋಷ, ಹೂವಿನ ಹಾರಗಳು ಮತ್ತು ನೂರಾರು ಜನರ ಉಪಸ್ಥಿತಿಯಿಂದ ನಿಲ್ದಾಣದ ಪರಿಸರ ಹಬ್ಬದ ವಾತಾವರಣವನ್ನು ತಾಳಿತು.
ರಾತ್ರಿ 8.12ಕ್ಕೆ ರೈಲು ಸುಬ್ರಹ್ಮಣ್ಯ ರೋಡ್ ತಲುಪಿದ ವೇಳೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಬೃಜೇಶ್ ಚೌಟ ಅವರು ರೈಲಿನಿಂದ ಪ್ರಯಾಣಿಸುತ್ತಿದ್ದರು. ಅವರ ಜೊತೆಗೆ ಸುಳ್ಯ ಶಾಸಕೆಯನ್ನು ಭಾಗೀರಥಿ ಮೂರುಳ್ಯ, ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರೂ ಸಹ ಪ್ರಯಾಣದಲ್ಲಿ ಭಾಗಿಯಾಗಿದ್ದರು.
ಸ್ಥಳೀಯ ಮುಖಂಡರಾದ ರೈಲ್ವೇ ಬಳಕೆದಾರರ ವೇದಿಕೆಯ ಅಧ್ಯಕ್ಷ ಪ್ರಸಾದ್ ಕೆ.ಜಿ ನೆಟ್ಟಣ, ಎ ಬ್ಯಾಂಕ್ ಅಧ್ಯಕ್ಷ ಒಡಿಯಪ್ಪ ಸಿ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಧುಸೂದನ್, ಕಿಶೋರ್ ಶಿರಾಡಿ ಮತ್ತಿತರರು ನಿಲ್ದಾಣದಲ್ಲಿ ರೈಲಿಗೆ ಭವ್ಯ ಸ್ವಾಗತ ಕೋರಿದರು.
ಈ ನೂತನ ರೈಲು ಸೇವೆಯಿಂದ ಸುಬ್ರಹ್ಮಣ್ಯ, ಸುಳ್ಯ ಹಾಗೂ ಕಡಬ ಭಾಗದ ನಿವಾಸಿಗಳಿಗೆ ಮಂಗಳೂರಿನೊಂದಿಗೆ ನೇರ ಸಂಪರ್ಕ ಸಿಗಲಿದ್ದು, ದೈನಂದಿನ ಸಂಚಾರ ಸುಲಭವಾಗಲಿದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ವ್ಯಾಪಾರಿಗಳಿಗೂ ಇದು ಬಹುಪಯೋಗಿಯಾಗಿ ಪರಿಣಮಿಸಲಿದೆ. ಸ್ಥಳೀಯರು ಈ ಅಭಿವೃದ್ಧಿಗೆ ಸಂತೋಷ ವ್ಯಕ್ತಪಡಿಸಿದ್ದು, ರೈಲ್ವೆ ಇಲಾಖೆಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ರೈಲ್ವೆ ಸಿಬ್ಬಂದಿ ಶಿಸ್ತುಬದ್ಧ ಭದ್ರತೆ ಹಾಗೂ ವ್ಯವಸ್ಥೆಯ ನಿರ್ವಹಣೆಯಲ್ಲಿ ತೊಡಗಿದ್ದರು.
Post a Comment