ಕಡಬ, ಮೇ 25 – ಸುಬ್ರಹ್ಮಣ್ಯ–ಉಡುಪಿ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ರವಿವಾರ ಭಾರೀ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದು ಚಾಲಕನೊಂದಿಗೆ ಇಬ್ಬರು ಮಹಿಳೆಯರು ಮತ್ತು ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಇಚ್ಲಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು (ಕೆಎ 14 ಎಂಬಿ 0226) ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಬಂದಾಗ ರಸ್ತೆ ಬದಿಯಲ್ಲಿದ್ದ ಮರ ಆಕಸ್ಮಿಕವಾಗಿ ಕಾರಿನ ಮೇಲೆ ಬಿದ್ದುದು. ಪರಿಣಾಮವಾಗಿ ಕಾರಿನಲ್ಲಿದ್ದವರು ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಧುಮುಕಿ, ಗಾಯಾಳುಗಳನ್ನು ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದವರ ಪ್ರಕಾರ, ಗಾಯಾಳುಗಳಿಗೆ ಮುಖ ಮತ್ತು ಕೈ–ಕಾಲುಗಳಿಗೆ ತೀವ್ರ ರಕ್ತಗಾಯಗಳಾಗಿವೆ. ಈ ಘಟನೆ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿತು. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳೀಯರು ಮರ ತೆರವಿಗೆ ಸಹಕಾರ ನೀಡಿದ್ದಾರೆ.
إرسال تعليق