ವಿಪರೀತ ಮಳೆ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಡಬ ತಹಶಿಲ್ದಾರ್ ಶ್ರೀ ಪ್ರಭಾಕರ ಖಜೂರೆ ಅವರು ಮೇ 27ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಸಹ ಉಪಸ್ಥಿತರಿದ್ದರು.
ತಹಶಿಲ್ದಾರ್ ಅವರು ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ತಾತ್ಕಾಲಿಕ ಆದೇಶ ಹೊರಡಿಸಿದ್ದು, ಎಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ, ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆ ಹಾಗೂ ಎತ್ತರದ ಸಂಪರ್ಕ ರಸ್ತೆ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸ್ನಾನಘಟ್ಟದಲ್ಲಿ ಶಾಶ್ವತ ತಡೆ ಬೇಲಿ ನಿರ್ಮಾಣ – ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟನೆ
ಕುಕ್ಕೆ ಸುಬ್ರಹ್ಮಣ್ಯ ಸುಮಾರು ಆರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸುಬ್ರಹ್ಮಣ್ಯ–ಪುತ್ತೂರು ರಸ್ತೆಯನ್ನು ಎತ್ತರಗೊಳಿಸುವ ಕಾಮಗಾರಿಯ ಜೊತೆಗೆ ದರ್ಪಣ ತೀರ್ಥ ನದಿಗೆ ಹೊಸ ಸೇತುವೆ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ, ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು.
ಅವರ ಪ್ರಕಾರ, “ಅಕಾಲಿಕ ಮಳೆಯಿಂದ ನೂತನವಾಗಿ ನಿರ್ಮಿತವಾಗುತ್ತಿರುವ ರಸ್ತೆಯ ಭಾಗದಲ್ಲಿ ಮಣ್ಣು ಕುಸಿತಗೊಂಡಿದ್ದು, ಸಂಚಾರ ಅಡಚಣೆಗೆ ಒಳಪಟ್ಟಿದೆ. ಇನ್ನು ಕುಮಾರಧಾರ ಸ್ನಾನಘಟ್ಟದಲ್ಲಿ ನೀರಿನ ಪ್ರಮಾಣವೂ ಭಾರೀ ಏರಿಕೆಯಾಗಿದ್ದು, ಭಕ್ತರ ಸುರಕ್ಷತೆಯ ನಿಟ್ಟಿನಲ್ಲಿ ತಹಶಿಲ್ದಾರ್ ಪ್ರಭಾಕರ ಖಜೂರೆ ಅವರು ನದಿಗೆ ಇಳಿದು ತೀರ್ಥ ಸ್ನಾನ ನಿಷೇಧದ ಆದೇಶ ನೀಡಿದ್ದಾರೆ.”
“ಸ್ಥಳ ಪರಿಶೀಲನೆಯ ಬಳಿಕ ಭದ್ರತಾ ಕ್ರಮವಾಗಿ ಈಗಾಗಲೇ ಇಬ್ಬರು ಹೆಚ್ಚುವರಿ ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಶೀಘ್ರದಲ್ಲೇ ನದಿಗೆ ಇಳಿಯುವ ಮೆಟ್ಟಿಲುಗಳ ಬಳಿ ಶಾಶ್ವತ ತಡೆಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಹೇಳಿದರು.
“ಪುತ್ತೂರು–ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿ ವೇಳೆ ಮಳೆಗಾಲ ಆರಂಭವಾಗಲಿದೆಯೆಂದು ತಿಳಿದಿದ್ದರೂ ಸಹ ಮಣ್ಣು ತುಂಬುವ ಮೂಲಕ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಇದರಿಂದ ಭೂಕುಸಿತ ಸಂಭವಿಸಬಹುದಾದ ಸಾಧ್ಯತೆ ಇದೆ. ಅಲ್ಲದೇ, ಕೃತಕ ನೆರೆ ಪರಿಸ್ಥಿತಿಯೂ ರೂಪುಗೊಳ್ಳುವ ಭೀತಿ ಇದೆ.
ಈ ಕುರಿತು ಗ್ರಾಮಸಭೆಯಲ್ಲಿ ಚರ್ಚೆ ನಡೆದರೂ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇದೀಗ ಈ ಸಮಸ್ಯೆಗಳ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ,” ಎಂದರು.
ಸುಬ್ರಹ್ಮಣ್ಯ ಠಾಣಾಧಿಕಾರಿ, ಕಾರ್ತಿಕ್,ಆರ್. ಐ ,ದೇವಸ್ಥಾನದ
ಇಂಜಿನಿಯರ್ ಉದಯಕುಮಾರ್, ಗ್ರಾಮಪಂಚಾಯತ್ ಕಾರ್ಯದರ್ಶಿ ಮೋನಪ್ಪ, ಉದಯಕುಮಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment