ನೆಕ್ಕಿಲಾಡಿ ಜಂಕ್ಷನ್ ಬಳಿ ಮರಳು ಸಾಗಾಟದ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು, ಯಾವುದೇ ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ್ ಬಿ. ಹಾದಿಮನಿ ಅವರು ಸಿಬ್ಬಂದಿಗಳೊಂದಿಗೆ ದಿನಾಂಕ 13-06-2025ರಂದು ಸಂಜೆ 5.15ರ ಸುಮಾರಿಗೆ ನೆಕ್ಕಿಲಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನೆಲ್ಯಾಡಿಕಡೆಯಿಂದ ಬರುತ್ತಿದ್ದ ಕೆಎ-02-ಎಕೆ-3993 ಸಂಖ್ಯೆದ ಪಿಕಪ್ ವಾಹನವನ್ನು ತಪಾಸಣೆ ಮಾಡಲಾಗಿದೆ.
ತಪಾಸಣೆಯಲ್ಲಿ ವಾಹನದಲ್ಲಿ ಸುಮಾರು 50 ಪ್ಲಾಸ್ಟಿಕ್ ಬುಟ್ಟಿಗಳಷ್ಟು ಮರಳು ತುಂಬಿರೋದನ್ನು ಪೊಲೀಸರು ಪತ್ತೆಹಚ್ಚಿದ್ದು, ಚಾಲಕನನ್ನು ವಿಚಾರಿಸಿದಾಗ ಮರಳು ಸುಕ್ರಿಯಾ ಟ್ರೆಡಿಂಗ್ ಸೆಂಟರ್ ಮಾಲಿಕ ಮಹಮ್ಮದ್ ಅಶ್ರಫ್ ಅವರ ಅಂಗಡಿಯಿಂದ ತುಂಬಿಸಿ ಪೆರ್ನೆಗೆ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ. ಈ ಮರಳಿಗೆ ಯಾವುದೇ ಕಾನೂನು ಪರವಾನಿಗೆ ಇಲ್ಲದಿರುವುದರಿಂದ, ಮರಳು ಕಳವು ಮಾಡಿ ಮಾರಾಟಕ್ಕೆ ಸಾಗಿಸಲಾಗುತ್ತಿದ್ದ ಶಂಕೆಯಿದೆ.
ಚಾಲಕ ಶರೀಫ್ (28 ವರ್ಷ) ಎಂಬುವವನನ್ನು ಗುರುತಿಸಲಾಗಿದ್ದು, ಸಾಗಾಟವಾಗುತ್ತಿದ್ದ ಮರಳಿನ ಮೌಲ್ಯವನ್ನು ಸುಮಾರು ₹2,500 ಎಂದು ಅಂದಾಜಿಸಲಾಗಿದೆ. ಪಿಕಪ್ ವಾಹನದ ಮೌಲ್ಯ ₹4,50,000/- ಆಗಿರಬಹುದು.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಂ. 51/2025 ರಂತೆ ಕರ್ನಾಟಕ ಲಘು ಖನಿಜ ನಿಯಮ 1994ರ ಸೆಕ್ಷನ್ 42, 43, 44 ಹಾಗೂ Mines and Minerals (Development and Regulation) Act, 1957ರ ಸೆಕ್ಷನ್ 4(1), 4(1A), 21(1)(A), ಜೊತೆಗೆ ಭಾರತೀಯ ನ್ಯಾಯಸಂಹಿತೆ 2023ರ ಸೆಕ್ಷನ್ 303(2) ಹಾಗೂ 3(5) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
إرسال تعليق