*ದೇವಾಲಯ, ದೈವಾಲಯ, ಮನುಷ್ಯಾಲಗಳ ವಾಸ್ತುಶಿಲ್ಪ ಶಾಸ್ತ್ರ ಪಂಡಿತ*, *ಎಸ್ ಎಂ ಪ್ರಸಾದ*, *ಮುನಿಯಂಗಳ.ಸುಬ್ರಹ್ಮಣ್ಯ*

 ಇಳೆಯಲ್ಲಿ ಜನಿಸಿದ ನಮ್ಮೀ ಶರೀರವನ್ನು ಆರೋಗ್ಯ ಪೂರ್ಣ ದೀರ್ಘಾಯುಸ್ಸಿನಿಂದ ಜತನದಿಂದ ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ಅವಶ್ಯ. ಜೀವನ ಕಲ್ಯಾಣಮಯವಾಗಿ ಸಾಗಲು ಮನೋರಂಜನೆ ಅವಶ್ಯ.ಶ್ರವಣೇoದ್ರಿಯ ಪ್ರಸನ್ನತೆಯಿಂದ ನಾವು ಹರ್ಷಗೊಂಡು, ಆರೋಗ್ಯ ವೃದ್ಧಿಯಾಗುವುದು.ಗಾಳಿ -ಮಳೆ- ಬಿಸಿಲುಗಳಿಂದ, ಪ್ರಾಣಿ-ಪಕ್ಷಿಗಳಿಂದ ಸುರಕ್ಷಿತವಾಗಿ ಬದುಕಿ ಬಾಳಲು ಮನುಷ್ಯಾಲಯವಿರಬೇಕು. ಹಾಗೆಯೇ ದೇವಾಲಯ, ದೈವಾಲಯ ಇನ್ನಿತರ ಅನೇಕ ಮಂದಿರಗಳು ಮನೋ ಮಂದಿರದ ಸುಭೀಕ್ಷೆಗೆ ಅವಶ್ಯವಿದೆ. ನಮ್ಮೆಲ್ಲ ರಚನೆಗಳು, ವಸ್ತುಗಳು ಸುಖ ಸಂತೋಷ ನೆಮ್ಮದಿ ತರುವಂತಿರಬೇಕಿದ್ದರೆ ರಚನಾ ಕ್ರಮಗಳಿಗೂ ವಾಸ್ತು ಶಾಸ್ತ್ರವನ್ನು ಋಷಿಮುನಿಗಳು ತಿಳಿಸಿರುವರು.ಅವುಗಳನ್ನು ಅಧ್ಯಯನ ನಡೆಸಿ ಅನುಭವ ಸಂಪನ್ನತೆ ಗಳಿಸಿರುವವರೇ ವಾಸ್ತು ಶಾಸ್ತ್ರಜ್ಞರು- ಶಿಲ್ಪಶಾಸ್ತ್ರಜ್ಞರು.

 ಸನಾತನ ಸಂಸ್ಕೃತಿಯ ವೈದಿಕ ಸಿದ್ಧಾಂತಗಳು ವಂಶ ಪಾರಂಪರ್ಯವಾಗಿ ನಡೆದು ಬಂದಿವೆ. ದೇವಾಲಯಗಳ ಅರ್ಚಕರು,ತಂತ್ರಿಗಳು, ಆಡಳಿತದಾರರು, ಜ್ಯೋತಿಷ್ಯರು, ಚಾಕರಿದಾರರು ಮುಂತಾದ ವ್ಯವಸ್ಥೆಗಳು ನಿರ್ದಿಷ್ಟ ದೇವಾಲಯಗಳಿಗೆ, ನಿರ್ದಿಷ್ಟ ಕುಟುಂಬಗಳೇ ಇದ್ದವು.ಇದಕ್ಕೆ ಕಾರಣವೂ ಇತ್ತು. ಕುಟುಂಬವು ಜೀವನಾಧಾರವಾಗಿ ನಡೆಸುವ ಕಾರ್ಯಗಳು ಮಕ್ಕಳಿಗೂ ಬಾಲ್ಯದಿಂದಲೇ ರೂಢಿಯಾಗಿ, ಹಿರಿಯರ ಅನುಭವಗಳು ಪಾಠ ಹೇಳುತ್ತವೆ. ಸಹಜವಾಗಿ ಮೈಗೂಡುತ್ತವೆ. ಕುಟುಂಬ ವೃತ್ತಿ ಅತಿ ಪ್ರಭಾವಶಾಲಿ ಎಂಬುದು ಸತ್ಯ.

 ಕರಾವಳಿ ಕರ್ನಾಟಕ ಭಾಗದ ವಾಸ್ತು ಲೋಕದಲ್ಲಿ ಮುನಿಯಂಗಳ ಕುಟುಂಬ ಜನಪ್ರಿಯ ಹೆಸರು. ಇವರ ಹಿರಿಯರು ಇಕ್ಕೇರಿ ಶಿವಪ್ಪ ನಾಯಕರ ಆಸ್ಥಾನ ವಿದ್ವಾಂಸರಾಗಿದ್ದರು.ಅಂದು ಬದಿಯಡ್ಕದ ಅಣಿಲೆ ಎಂಬಲ್ಲಿ ರಾಜರು ನೀಡಿದ ಉಂಬಳಿ ಆಸ್ತಿಯಲ್ಲಿ ವೇದಾಧ್ಯಯನ ನಿರತರಾಗಿದ್ದರು. ಆ ಕಾಲದಲ್ಲಿ ಟಿಪ್ಪು ಸುಲ್ತಾನ್ ದಾಳಿ ನಡೆಸಿದಾಗ ಇಕ್ಕೇರಿ ಅರಸರು ಮಂಡಿಯೂರಿದರು. ಅಲ್ಲಿಂದ ಹೊರನಡೆದು ಕಾಸರಗೋಡು ಸಮೀಪದ ಮನಿಯಂಗಳದಲ್ಲಿ ನೆಲೆಯೂರಿದರು. ಜ್ಯೋತಿಷ್ಯ ಹಾಗೂ ವಾಸ್ತುಶಿಲ್ಪದ ಅನುಕೂಲಕ್ಕಾಗಿ ಮುನಿಯಂಗಳ ಕುಟುಂಬ 1975ರ ವೇಳೆ ಸುಬ್ರಮಣ್ಯದ ಸಮೀಪ ಬಿಳಿನೆಲೆ ಗ್ರಾಮದ ಗೋಪಾಳಿ ಎಂಬಲ್ಲಿ ಬದುಕು ಕಟ್ಟಿಕೊಂಡರು.

 ಆಧ್ಯಾತ್ಮ ಲೋಕದಲ್ಲಿ ಮುನಿಯಂಗಳ ಕೃಷ್ಣ ಭಟ್ಟರೆಂದೇ ಜನಪ್ರಿಯ ಹೆಸರಾದರು. ವೇದಾಂತರ್ಗತ ವಾಸ್ತುಶಿಲ್ಪವು ಇವರಿಗೆ ರಕ್ತಗತವಾಗಿತ್ತು. ಅವರದು ಗ್ರಾಂಥಿಕ ಅನುಭವವಲ್ಲ, ಬಳಸಿ ಬಂದ,ಗಳಿಸಿ ನಿಂದ, ಬೆಳೆಸಿಕೊಂಡ ಅನುಭವ ಅದಾಗಿತ್ತು. 

 ಕೃಷ್ಣ ಭಟ್ಟರು ಶಾಸ್ತ್ರ ಶ್ಲೋಕಗಳ ಆಧಾರದಿಂದ ಮಾತನಾಡಬಲ್ಲ ಪ್ರಕಾಂಡ ಪಂಡಿತರು. ಅವರ ಮಾತಿಗೆ ಎರಡಿಲ್ಲ. ಪಂಡಿತರೇ ಇರಲಿ - ಅಧಿಕಾರಿಗಳೇ ಇರಲಿ ತಲೆಯೆತ್ತಿ ನಿಂತು ಮಾತನಾಡಬಲ್ಲವರು. ನಂಬಿ ಬಂದವರಿಗೆ ಮುಡಿಬಾಗಬಲ್ಲರು. ಪಾಂಡಿತ್ಯದ ಪ್ರಗಲ್ಬತೆ ಅಷ್ಟಿಷ್ಟಲ್ಲ.ಚತುರ್ಭಾಷಾ ಪಂಡಿತರು. ಚತುರವಾಗ್ಮಿ ವಿಷಯದ ಆಳಕ್ಕಿಳಿಯಬಲ್ಲರು. ಗಡಸು- ಗಂಭೀರ ಕಂಠ ಅವರದು. ಆಶಾಸ್ತ್ರೀಯವಾದುದನ್ನು ಖಂಡಿಸಬಲ್ಲರು. ಮುಖಸ್ತುತಿ ಸಹಿಸಲಾರರು. ಜ್ಯೋತಿಷ್ಯದಲ್ಲಿ 190 ದೇವಾಲಯಗಳಿಗೆ ಶಿಲ್ಪ ಶಾಸ್ತ್ರಜ್ಞತೆಯ ಧಾರೆಯೆರದವರು. ಇವರು 1996 ರಲ್ಲಿ ಕಾಲವಾದರು. 

 ಕೃಷ್ಣಭಟ್ಟ ಮತ್ತು ಸರಸ್ವತಿ ದಂಪತಿಗಳಿಗೆ ದೇವಕೀದೇವಿ, ಶಾರದಾ, ಮಹಾಲಕ್ಷ್ಮಿ, ಶ್ರೀಕೃಷ್ಣ ಮಹಾಲಿಂಗ ಪ್ರಸಾದ ಮತ್ತು ಸತ್ಯಭಾಮ ಎಂಬ ಐದು ಮಕ್ಕಳು. ನನ್ನ ವಂಶ ಪಾರಂಪರ್ಯ ವೃತ್ತಿ ನಡೆಸಲು ಗಂಡು ಸಂತಾನವೊಂದು ಬೇಕೆಂಬ ಬಯಕೆ ಅವರದು. ಗುರುವಾಯೂರು ಶ್ರೀಕೃಷ್ಣನ ಪರಮ ಭಕ್ತರಾದ ಕೃಷ್ಣಭಟ್ಟ ದಂಪತಿಗಳು ಅನೇಕ ದಿನಗಳ ಕಾಲ ದೇವರ ಮುಂದೆ ಭಜಿಸಿ ಮೊರೆಯಿಟ್ಟ ಫಲವೇ ಎಸ್ಎಂ ಪ್ರಸಾದ ಎಂಬ ಸೌಜನ್ಯ ಮೂರ್ತಿಯ ಜನನವಾಯಿತು. ಪೂರ್ಣ ಹೆಸರು ಶ್ರೀಕೃಷ್ಣ ಮಹಾಲಿಂಗ ಪ್ರಸಾದ. ಶ್ರೀಕೃಷ್ಣ ಗುರುವಾಯೂರಪ್ಪನಾದರೆ, ಮಹಾಲಿಂಗ ಅಜ್ಜ, ಪ್ರಸಾದ ದೇವರ ವರಪ್ರಸಾದ.

 ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುವುದು ನಿಜ. ಕೃಷ್ಣ ಭಟ್ಟರ ಮಗ ಎಸ್ ಎಂ ಪ್ರಸಾದ ಅಂತೆಯೇ ಇರುವರು. ಪ್ರಸಾದ ಪ್ರಶಾಂತ ಸಾಗರದಂತಿದ್ದರೆ, ಅಪ್ಪ ಅಬ್ಬರಿಸಿ ಬರುವ ತೆರೆಯಂತಿದ್ದರು. ಮಗನ ನಿರ್ಮಲ ಆಕಾಶದಂತಹ ವ್ಯಕ್ತಿತ್ವ, ಪ್ರತಿ ಮಾತು ಚಿಪ್ಪಿನಿಂದ ಚಿಮ್ಮಿ ಬಂದ ಮುತ್ತಿನಂತಿರುವುದು. ಅವರ ಸರಳತೆ, ಸೌಜನ್ಯತೆ, ನಿರಾಡಂಬರತೆಗಳ ವ್ಯಕ್ತಿತ್ವ ಯಾರನ್ನೂ ಆಕರ್ಷಿಸದಿರದು. ಅಪ್ಪ ಬಿಳಿ ಪಂಚೆಯುಟ್ಟು ಶಲ್ಯ ಹೊದ್ದವರಾದರೆ,ಮಗ ಬಿಳಿ ಪಂಚೆ, ಬಿಳಿ ಅಂಗಿ ಧರಿಸಿ, ಹಣೆಗೆ ತಿಲಕವಿತ್ತು, ಹೆಗಲ ಮೇಲೆ ಶಾಲು ಧರಿಸುವರು. ವಾಸ್ತು ಶಾಸ್ತ್ರವು ಬದಲಾಗುವ ಪರಿಸ್ಥಿತಿಗೆ ತಕ್ಕಂತೆ, ಮೂಲ ತತ್ವಗಳಿಗೆ ತಿಲಾಂಜಲಿ ನೀಡದೆ ಹೊಂದಿಕೊಳ್ಳುವಂತಿರಬೇಕೆಂಬ ಸಂದೇಶ ಇವರ ಉಡುಪು ಸಾರುವಂತಿದೆ.

 ಮುನಿಯಂಗಳದಲ್ಲಿ ಶಿಲ್ಪ ಶಾಸ್ತ್ರದ ಆಳ ಅಧ್ಯಯನದೊಂದಿಗೆ ಶ್ರೀಮುನಿ ಯಂತೆ ತಪಗೈದ ಅಪ್ಪನ ತಜ್ಞತೆಯ ಕಿರಣ ಪ್ರಸಾದರ ಬಾಲ್ಯದ ಬದುಕಿಗೆ ವರಪ್ರಸಾದವೆನಿಸಿತು. ಶಾಲೆಯ ರಜಾ ದಿನಗಳು - ಭಾನುವಾರ, ಮನೆಯ ಹಜಾರ ದೇವ - ದೈವ ಭಕ್ತರಿಂದ ಹಾಗೂ ಬಾಳಲ್ಲಿ ನೊಂದು ಬೆಂದವರಿಂದ ತುಂಬಿ ತುಳು ಕಾಡುತ್ತಿತ್ತು. ಶಾಲಾ ಪರೀಕ್ಷೆಯಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ, ಆದರೆ ಬದುಕಿಗೆ ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆ ಪತ್ರಿಕೆ. ಒಂದರ ಉತ್ತರ ಇನ್ನೊಂದಕ್ಕಾಗದು. ಆಗಮಿಕರು ಎನಿತೆನಿತು ಬಗೆಯ ಸಮಸ್ಯೆಗಳು,ಅಪೇಕ್ಷೆ - ನಿರೀಕ್ಷೆಗಳ ಬಯಸಿ ಬರುವರು .ಜ್ಯೋತಿಷ್ಯ ಶಾಸ್ತ್ರಜ್ಞರು ಅವರೆಲ್ಲರ ಅಂತರಂಗದ ಅರಿವು ಜಾಗೃತಗೊಳಿಸುವ ಮನ:ಶಾಸ್ತ್ರಜ್ಞರೂ ಆಗಿರಬೇಕು. ಬೇಕು ಬೇಕಾದ ಸಲಕರಣೆಗಳು, ಬರಹಗಳು, ಲೆಕ್ಕಾಚಾರಗಳನ್ನು ಮಗನನ್ನು ಬಳಿ ಕರೆದು ಮಾಡುತ್ತಾ - ಮಾಡಿಸುತ್ತಾ ಮುಂಬಾಳ್ವೆಯ ಮುನ್ನಡೆಗೆ ಬೆಳಕು ತೋರುತ್ತಿದ್ದರು. ಮಗ ಪ್ರಸಾದ ಅಪ್ಪನಂತೆ ಏಕಪಾಠಿ. ವಿಚಾರಗಳ ಒಳಸುರಿ ಎದೆಯ ಬಿತ್ತಿಯಲಿ ಮಿಸುಕಾಡದೆ ನೆನಪಾಗಿ ಉಳಿದು ಬಯಸಿದಾಗ ಸ್ಫುರಿಸುತ್ತಿತ್ತು.

 ವಂಶವೃಕ್ಷದಲ್ಲಿ ತಾನೇ ತಾನಾಗಿ ಪ್ರವಹಿಸುವ ಇಂತಹ ಬಹು ಬಗೆಯ ಅದ್ಭುತ ಶಕ್ತಿಗಳ ಸಹಜ ಹರಿವು - ಹರಿದು ಮಕ್ಕಳು ಅಭಿಜ್ಞರಾಗಿ ಬಿಡುವರು. ಬಾಲ್ಯದ ದಿನಗಳಲ್ಲಿ ಕಿವಿಗಪ್ಪಳಿಸುವ ವಿಷಯ ತರಂಗಗಳು ಸ್ಮೃತಿ ಪಟಲದಲ್ಲಿ ನಿಲ್ಲಬಲ್ಲವು. ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ನೀಡುವ ಮಾತು ಮುತ್ತುಗಳ ಪೋಣಿಸಿ, ಹಾರ ಕಟ್ಟುವ ಅಭ್ಯಾಸಿಯಾದರು ಪ್ರಸಾದರು. ಕಲಿಯಲೇ ಬೇಕೆಂಬ ಹಠದಿಂದ ಅವರಿಗೆ ಕಲಿಸಲಿಲ್ಲ.ಅಪ್ಪನ ನಡೆ - ನುಡಿಗಳೇ ಬಾಲ ಪಾಠವಾಯಿತು.

 ಅಪ್ಪ ವಾಸ್ತು ಶಾಸ್ತ್ರಜ್ಞರು ಆಗಿದ್ದುದರಿಂದ, ಪ್ರತಿ ಮಾಸದ ಹಲವು ದಿನ ದೇವಾಲಯ - ದೈವಾಲಯ- ಮನುಷ್ಯಾಲಯಗಳ ಸ್ಥಳ ಪರಿಶೋಧನೆ,ವಾಸ್ತು ವಿನ್ಯಾಸ ರಚನೆಗಳಿಗಾಗಿ ಎಡೆಬಿಡದೆ ಸಂಚಾರವಿಡುತ್ತಿದ್ದರು. ರಾತ್ರಿಯಲಿ ಮನೆಗೆ ಬಂದು ಉದ್ದಗಲಗಳ ಆಯವ್ಯಯ ನಡೆಸಿ ಸ್ವರೂಪ ನೀಡುವ ದುಗುಡ ಅವರದು. ಬಿಡುವಿದ್ದಾಗಲೆಲ್ಲ ಪುತ್ರನು ಮೈಯೆಲ್ಲಾ ಕಿವಿಯಾಗಿ -ಕಣ್ಣಾಗಿ ಅಪ್ಪನೊಡನೆ ಕಲೆತು ಬಿಡುವಷ್ಟು ಜಾಣರ ಜಾಣ. ಅಪ್ಪ ಎಲ್ಲೇ ಹೋಗಿ ಕಾರ್ಯ ಬಾಹುಳ್ಯ ಮುಗಿಸಿ ಬಂದು ಅಂದಂದಿನ ನವನವೀನ ಆಯಾಮಗಳ ಕಥೆಯನ್ನು ಮಗನ ಮುಂದಿಡುತ್ತಿದ್ದರು. ಅಗತ್ಯ - ಅನಗತ್ಯಗಳೆಂದು ವಿಂಗಡಿಸದೆ ಕಿವಿ ತುಂಬಿದರೆ ಬೇಕೆಂದಾಗ ಎರಡೂ ಅಗತ್ಯವೆನಿಸುವುದೆಂದು ಅವರಿಗೆ ತಿಳಿದಿತ್ತು.

 ಪ್ರಸಾದರು ಮುನಿಯಂಗಳದ ಸನಿಹದ ಚೇರು - ಬಿಳಿನೆಲೆ - ಕೈಕಂಬ ಇಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಪೂರೈಸಿದರೆ,ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ಪ್ರೌಢ ತರಗತಿ, ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ, ಸುಂಕದಕಟ್ಟೆ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಕಲಿತು ಮುಗಿಸಿದರು.


 ಜೊತೆ ಜೊತೆಯಾಗಿ ಅಪ್ಪನ ವಾಸ್ತು ಪಾಠ ಅರಿವಿಲ್ಲದೆ ಅರಿವು ತುಂಬಿತು. ಅಪ್ಪ ಕೊಡುವ ನಕ್ಷೆಗಳ ಲೆಕ್ಕಾಚಾರಗಳನ್ನು ತಾನು ಕಲಿತ ವಿದ್ಯೆಯ ಜೊತೆ ಸಮೀಕರಣಸಿ, ಮುಂದಿಟ್ಟು ಶಹಬ್ಬಾಸ್ ಗಿಟ್ಟಿಸುವಷ್ಟು ಪ್ರಸಾದ ವಾಸ್ತು ತಜ್ಞರಾದರು. ಸರಸ್ವತಿ ಮಾತೆ ಶಾಸ್ತ್ರ ಶ್ಲೋಕಗಳನ್ನು ನಾಲಿಗೆಯ ತುದಿಯಲ್ಲಿ ನಿಂತು ನುಡಿಸುತ್ತಿದ್ದಳು. ವಾಸ್ತುಶಿಲ್ಪದ ಎಲ್ಲ ಪಟ್ಟುಗಳು ಮೈಗೂಡಿ, ಅಪ್ಪನನ್ನು ಕರೆದಲ್ಲಿ ಮಗನೇ ಹೋಗುವಷ್ಟು ಬೆಳೆದು ನಿಂತರು.

 1992 ರಲ್ಲಿ ಲೌಕಿಕ ಶಿಕ್ಷಣಕ್ಕೆ ಪೂರ್ಣ ವಿರಾಮವಿಟ್ಟು, ಅಪ್ಪನ ಕಾಯಕದಲ್ಲೇ ಕೈಲಾಸವೇರಲು ಹೊರಟು ನಿಂತರು. ಅಪ್ಪ ನಡೆದ ಒಂದೊಂದು ದೇಗುಲಗಳು ಮಗನ ಯಶಸ್ಸಿನ ಮೆಟ್ಟಿಲುಗಳಾದವು. ಒಂದೊಂದು ದೇಗುಲದ ವೈವಿಧ್ಯಮಯ ಸನ್ನಿವೇಶಗಳು, ಪರಂಪರೆಗಳು, ನಂಬಿಕೆಗಳು, ಆರಾಧನಾ ವಿಧಿ - ವಿಧಾನಗಳು, ಆಡಳಿತದಾರರ ಮರ್ಜಿಗಳು,ತಂತ್ರಿವರ್ಯರ ಸಲಹೆಗಳು, ಹಿರಿಯರ ನಂಬಿಕೆಗಳು ಇವೆಲ್ಲವುಗಳ ನಿಜವಾದ ಒಳಗನ್ನು ತೆರೆದಿಟ್ಟು, ಗೌಪ್ಯತೆಗಳ ಕಾಪಿಟ್ಟು, ವೈತಾಲಿಕರ ಬದಿಗಿಟ್ಟು,ವಿಹಿತ ದಾರಿ ತೋರುವ ಸರ್ವ ಜನ ಸನ್ನುತರಾಗಿ, ಬಲುಹು ತೋರಬಲ್ಲ ಗಟ್ಟಿಗನಾಗಿ ಹೆಜ್ಜೆ ಹೆಜ್ಜೆಗೆ ವಾಸ್ತುಶಿಲ್ಪ ಶಾಸ್ತ್ರ ಇವರನ್ನು ಆವರಿಸಿ ಬಿಟ್ಟಿತು. ಅಪ್ಪನನ್ನು ಮೀರಿಸುವಂತಿರುವ ಮಗನೆಂದು ಕಂಡವರಾಡಿದ ಮಾತು ನಿಜವೆನಿಸಿತು.

 ನಾನಿರುವುದೇ ನೇರ - ನಿಷ್ಠುರವೆಂದು, ಸಾವಿರಾರು ವರ್ಷಗಳ ಪ್ರಾಚೀನ ಕೃತಿಯೊಳಗಿನ ಶಾಸ್ತ್ರಗಳಿಗೆ ಅಂಟಿ ಕುಳಿತು, ದೇಶ- ಕಾಲ - ಆಚಾರಗಳನ್ನು ಕಾಲಕಾಲದ ಬದಲಾವಣೆಗಳ ಬಳಸಿಕೊಳ್ಳದೆ, ನನ್ನದೇ ನಿಜ ಶಾಸ್ತ್ರವೆಂದು ಕಾಠಿಣ್ಯತೆ ತೋರಿದರೆ ಯೋಗ್ಯವೆನಿಸದೆಂಬ ದೈವಜ್ಞ ಭಾವವು ಇವರಲ್ಲಿದೆ. ನಂಬಿಕೆ, ಪುರಾಣ,ಇತಿಹಾಸ, ಪ್ರಾದೇಶಿಕತೆ ತಿಳಿದು, ಯುಗಪುರುಷರು ನಡೆದ ಹಾದಿ ಅರಿತು ಅನಿವಾರ್ಯ ಸಮಯ ಸಂದರ್ಭಕ್ಕೆ ಹೊಂದಿ ಶಾಸ್ತ್ರ ನಿರೂಪಿಸದೆ ಹೋದರೆ ಎಲ್ಲಾ ಶೂನ್ಯವೆನಿಸಬಹುದು ಎಂಬ ಧರ್ಮ ಸೂಕ್ಷ್ಮತೆ ಇವರಲ್ಲಿ ಸುಪ್ತವಾಗಿದೆ. ವಿನಯಶಾಲಿ ಆದರೆ ಸಾಲದು,ವಿವೇಕ ಶಾಲಿಯೂ ಆಗಿರಬೇಕೆಂಬ ದೃಢ ನಿಲುವು ಇವರ ಮನದೊಳಗಿದೆ. 

 ಇವರ ತಂದೆಯವರು ಲೌಕಿಕ ಶಿಕ್ಷಣದಲ್ಲಿ ಡಿಗ್ರಿ ಪಡೆಯದೇ ಹೋದರು, ವೇದ- ವೇದಾಂಗಗಳ ಸಮಗ್ರ ಆಳ ಅಗಲ ಬಲ್ಲವರು. ಸಂಸ್ಕೃತ ಭಾಷೆಯಲ್ಲಿರುವ ಪ್ರಾಚೀನ ಗ್ರಂಥಗಳನ್ನು ಋಷಿಮುನಿಗಳು ಆಳ ಅಧ್ಯಯನ ನಡೆಸಿ, ಸಂಶೋಧಿಸಿ, ಸಾರ ಸಂಗ್ರಹ ಗೈದಿಟ್ಟ ಅನುಭವ ನಿಧಿಗಳೆಂದು ಚೆನ್ನಾಗಿ ಬಲ್ಲವರು. ಅಲ್ಲಿರುವ ಪದಗಳ ಶಬ್ದಾರ್ಥ ಚಿಂತನೆ ನಡೆಸಿ,ಅವುಗಳ ಮರ್ಮ ತಿಳಿದು ಆಧುನಿಕ ಜಗತ್ತಿನ ಆಂಗ್ಲ ಪದಗಳ ಹುಟ್ಟಿಗೆ ಪ್ರೇರಣೆ - ಪ್ರಭಾವಗಳ ಮೂಲವೆಂದು ತಿಳಿದವರು. ಅಂದಿನ ಬ್ರಹ್ಮಾಸ್ತ್ರವೆಂದರೆ ಇಂದಿನ ಬ್ರಹ್ಮೋಸ್ ನಂತೆ ಶಕ್ತಿಶಾಲಿ ಅಸ್ತ್ರಗಳೆಂದು ವೈಜ್ಞಾನಿಕವಾಗಿ ವಿಶ್ಲೇಷಿಸಿದವರು. ದ್ವಾರಕಾ ನಗರಿಯ ಚೆಲುವು 3ಡಿ ಫಿಲಂಗೆ ಸ್ಪೂರ್ತಿ, ಸಕಲ ರಾಶಿ ಚಕ್ರಗಳನ್ನು ತಿಳಿಸಬಲ್ಲ ನಮ್ಮ ಪಂಚಾಂಗಕ್ಕೆ ಪರ್ಯಾಯವಿಲ್ಲ ಎಂಬುದನ್ನು ಅರಿತವರು. ಬಾಲ್ಯದಲ್ಲಿ ವಿವೇಚನಾ ಸಾಮರ್ಥ್ಯ ತುಂಬಿರುವರು. ಪುರೋಗಾಮಿ ವ್ಯಕ್ತಿತ್ವದ ಎಸ್‌ ಎಂ ಪ್ರಸಾದರು ಮಿತ ಭಾಷಿಯಾಗಿದ್ದು ದೃಢ ನಿಲುವು ತೋರಬಲ್ಲ ಸ್ಥಾಯೀ ಭಾವದ ಪ್ರತಿಭಾ ಖಣಿ.

 ಎಸ್ ಎಂ ಪ್ರಸಾದ ದಕ್ಷಿಣ ಭಾರತದ ಪ್ರತಿಭಾ ಸಂಪನ್ನ ಮೇರು ವಾಸ್ತು ಶಿಲ್ಪ ಶಾಸ್ತ್ರ ಪಂಡಿತರೆಂಬುದಕ್ಕೆ ಎರಡು ಮಾತಿಲ್ಲ. ಅಪ್ಪ ಇನ್ನೂರು ದೇವಾಲಯಗಳ ಪ್ರವರ್ಧಮಾನರಾದರೆ ಮಗ ಈಗಾಗಲೇ ಮುನ್ನೂರ ಹತ್ತು ದೇವಾಲಯಗಳ ಭವ್ಯ ಪರಂಪರೆಗೆ ಸಾಕ್ಷಿಯಾದವರು.

 ಧರ್ಮಸ್ಥಳ,ಮಧೂರು, ತಲಕಾವೇರಿ,ಮುಂಬೈ, ಎಡನೀರು, ಶಿರಾ, ಶ್ರೀಚಕ್ರ ನಗರ ಬೆಂಗಳೂರು,ಮಲ್ಲ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಇನ್ನೂ ಅನೇಕಾನೇಕ ಪುರಾಣ ಪ್ರಸಿದ್ಧ ದೇವಾಲಯಗಳಿಗೆ ವಾಸ್ತು ದರ್ಶನವಿತ್ತವರು. ಅಯೋಧ್ಯ ಶ್ರೀರಾಮಚಂದ್ರ ದೇವಾಲಯದ ವಾಸ್ತು ವಿನ್ಯಾಸ ಚರ್ಚಿತವಾದಾಗ ಯಾವುದೇ ಹೆಸರು - ಫಲಾಪೇಕ್ಷೆ ಇಲ್ಲದೆ ತನ್ನ ಅಂತರಂಗದ ಅನುಭವಗಳನ್ನು ಸೂಕ್ತ ವ್ಯಕ್ತಿಗಳಲ್ಲಿ ತಲುಪಿಸಿದರು.

 ಇವರು ನಿತ್ಯ ದೇಗುಲ ಸಂಚಾರಿ. ಅವರ ಭೇಟಿಗೆ ಕೆಲವು ತಿಂಗಳ ಮೊದಲೇ ನಿಶ್ಚಯಿಸಬೇಕು. ಎಲ್ಲವೂ ನನಗೆ ಬೇಕೆಂಬ ಆತುರವಿಲ್ಲ. ಹಣದಾಸೆ ಮೊದಲಿಲ್ಲ. ವಾಸ್ತುಶಿಲ್ಪಕ್ಕೆ ಮಾಧುರ್ಯತೆ ತುಂಬಬಲ್ಲ ಅನ್ಯಾದೃಶ, ಅಜಾತಶತ್ರು. ನಡೆಸಲು ನೀನು- ನಡೆಯುವೆ ನಾನು ಎಂಬಂತಿದ್ದು ದೇವಾಲಯಗಳಿಗೆ ಚೆಲುವು ತುಂಬುವರು. ಲಕ್ಷ್ಮಿಗೂ, ಸರಸ್ವತಿಗೂ ಸವತಿ ಮಾತ್ಸರ್ಯವಿದೆ. ಇವರು ಸರಸ್ವತಿ ಪುತ್ರ. ಇವರ ಹೆತ್ತಮ್ಮ ಸರಸ್ವತಿ.ಅವರು ಬಯಸಿದ್ದು - ಆಶೀರ್ವದಿಸಿದ್ದು ಕಲಿಸಿದ್ದು ಸರಸ್ವತಿಗೆ ಮುಡಿಬಾಗುವುದನ್ನು. ಸರಸ್ವತಿ ಒಲಿದರೆ ಲಕ್ಷ್ಮಿ ತಾನಾಗಿ ಬರುವಳೆಂಬ ಅರಿವು ಆ ಮಹಾ ಮಾತೆಯದು. 

 ಎಸ್ ಎಂ ಪ್ರಸಾದರ ಧರ್ಮಪತ್ನಿ ವೀಣಾ ಪ್ರಸಾದ್. ಪ್ರಸಾದರ ಹೃದಯ ಬಟ್ಟಲು ಬರಿದಾಗಲೂ ಬಿಟ್ಟವರಲ್ಲ. ಅವರ ಶಿಲ್ಪ ಶಾಸ್ತ್ರ ಕೌಶಲ್ಯಗಳಿಗೆ ಮೆರುಗು ತುಂಬಿದಾಕೆ. ಪ್ರಸಾದರು ಶಿಲ್ಪದಲ್ಲಿ ಚೆಲುವು ಮೂಡಿಸಿದರೆ,ಪ್ರಸಾದರಲ್ಲಿ ಚೆಲುವು ಮೂಡಿಸುವ ಶಿಲ್ಪಿ ವೀಣಾ. ಕೇವಲ ಪ್ರತಿಭೆ ಮಾತ್ರವೇ ಸೃಷ್ಟಿ ಕಾರ್ಯ ಮಾಡದು. ಮಡದಿ, ಪತಿಯ ಪ್ರಾಣ ವೀಣೆಯನ್ನು ನಯವಾಗಿ ಮೀಟಿದಾಗಲೇ, ಯಶದ ಅಲೆ ಬಿತ್ತರಗೊಳ್ಳುವುದು. ಪತಿಯ ವ್ಯಕ್ತಿತ್ವದ ಭಾಗವಾಗಿ ಅವರು ಸೇರಿ ಹೋಗಿರುವರು.. ಸುಖ ದುಃಖಗಳ ಭಾಗಿಯಾಗಿ ನಿಂತರು.ಪತಿಯ ಬರುವಿಕೆಗಾಗಿ ಧಣಿಯದೆ ದಾರಿ ಕಾದರು. ನಿಜ ಪರಿಸರದ ನಡುವೆ ತನ್ನ ಹಿರಿಯರಿಂದ ಬಂದ ಭೂ ಸ್ವರ್ಗದ ಚೆಲುವು ಹೆಚ್ಚಿಸಿದರು. ನಾನು ನಾನೆಂದು ತಿಳಿಯದೆ ನಾವಾಗಿ ಬಿಟ್ಟರು. ಮಾತಿಗೆ ಮಮತೆ ತುಂಬಿದರು. ಮಿತ್ತೂರು ಹೆಸರಾಂತ ಪುರೋಹಿತ ಮನೆತನದ ಕೇಶವ ಭಟ್ಟ - ದೇವಕಿ ದಂಪತಿಗಳ ಪುತ್ರಿ ಇವರು. ವೀಣಾ ಪ್ರಸಾದರ ಅಪ್ಪ -ಅಮ್ಮ, ಮಗಳಲ್ಲಿ ತುಂಬಿದ ಅಮೂಲ್ಯ ಗುಣ ನಿಧಿ ಕುಟುಂಬದಲ್ಲಿ ನಿರಂತರ ಪ್ರವಹಿಸಲಿ. ಶಿಕ್ಷಣ ಎಡವಲು ಬಿಡದು. ಸಂಸ್ಕಾರ ಕೆಡವಲು ಬಿಡದು. ಇದು ಸತ್ಯ.

 ಪ್ರಸಾದ- ವೀಣಾ ದಂಪತಿಗಳಿಗೆ ಮಕ್ಕಳಿಬ್ಬರು. ಮಗ ಅನಿರುದ್ಧ ಕೃಷ್ಣ ಅಪ್ಪ ಅಮ್ಮರಂತೆ ಪ್ರತಿಭಾವಂತ. ಸಿವಿಲ್ ಇಂಜಿನಿಯರಿಂಗ್ ಓದಿ, ಅಪ್ಪನ ಹಾದಿ ತುಳಿದು ಹೃದಯ ಕಮಲ ಅರಳಿಸಬಲ್ಲ ದೇವ ಮಂದಿರಗಳಿಗೆ ಪುಷ್ಟಿ ನೀಡಲಿ. ಜನಮಾನಸದಲ್ಲಿ ದಿವ್ಯ ದೃಷ್ಟಿ ತುಂಬಲಿ. ನಂಬಿಕೆಯ ಗಟ್ಟಿಗೊಳಿಸಲಿ. ಮಗಳು ಅಭಿಜ್ಞಾ. ಹೌದು ಅವಳು ಅಭಿಜ್ಞ. ಚೆನ್ನಾಗಿ ತಿಳಿದವಳು, ತಿಳಿದುಕೊಳ್ಳ ಬಲ್ಲವಳು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಗಿಟ್ಟಿಸಿದ ಚತುರೆ. ಅಭಿಜ್ಞಾ ಅಪರಾಜಿತಳಾಗದಿರಲಿ.

 ಎಸ್ ಎಂ ಪ್ರಸಾದರ ಪ್ರತಿಭಾ ಸಂಪನ್ನತೆಗೆ ರಾಜ್ಯೋತ್ಸವ ಪ್ರಶಸ್ತಿ,ಪದ್ಮಶ್ರೀ ಮುಂತಾದ ಪ್ರಶಸ್ತಿಗಳು, ತಾನಾಗಿ ಒಲಿದು ಬರಬೇಕಿತ್ತು. ಬರಲಿಲ್ಲ.ಬರಬಹುದಾದ ಎಲ್ಲಾ ಅರ್ಹತೆಗಳು ಅವರಲ್ಲಿವೆ. ಹೇಳಬೇಕಾದವರು ಹೇಳಬೇಕಷ್ಟೆ. ಅನೇಕ ದೇವಾಲಯಗಳ ಆಡಳಿತ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳು ಗೌರವ ಪುರಸ್ಕಾರ ನೀಡಿ ಗೌರವಿಸಿವೆ. ಪೇಜಾವರ ಮಠದ ವಿಶ್ವೇಶತೀರ್ಥರು, ರಾಮಚಂದ್ರಾಪುರ ಮಠದ ರಾಘವೇಶ್ವರ ತೀರ್ಥರು, ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥರು ಈಗಾಗಲೇ ಅವರನ್ನು ಸನ್ಮಾನಿಸಿ ಆಶೀರ್ವದಿಸಿರುವರು.

 ನನ್ನದು ಎಸ್ ಎಂ ಪ್ರಸಾದರದು ಮೂರು ದಶಕಗಳ ದೇವ ಮಂದಿರಗಳ ಕಾರಣದ ನಂಟು. ಅವರ ಸೌಶೀಲ್ಯತೆ,ಸೌಮ್ಯತೆ, ಮೃದು ಮಧುರ ಮಾತುಗಳಿಂದ ತುಂಬಾ ಇಷ್ಟವಾಗುತ್ತಾರೆ. ಅವರ ಮೂವತ್ತು ವರ್ಷಗಳ ವಾಸ್ತುಯಾನ, ಲೋಕದ ಜನರ ಬಾಳಿಗೆ ವಾಸ್ತು ಶಕ್ತಿ ತುಂಬಲಿ.

 *ಟಿ ನಾರಾಯಣ ಭಟ್ ರಾಮಕುಂಜ*
 *ರಾಜ್ಯ -ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*

Post a Comment

أحدث أقدم