ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಕಡಬ ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ಗಂಭೀರವಾಗಿ ಗಮನಹರಿಸಿ, ತಕ್ಷಣ ಕ್ರಮಕೈಗೊಳ್ಳಬೇಕೆಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸೂಚನೆ ನೀಡಿದರು.
ಕಡಬ ತಾಲೂಕು ಬಸ್ ನಿಲ್ದಾಣವು ಸುಬ್ರಹ್ಮಣ್ಯ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಮದ್ಯದಲ್ಲಿ, ತಿರುವಿನಲ್ಲಿ ನೆಲೆಗೊಂಡಿದೆ.
ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾರ ತೊಂದರೆ ಉಂಟಾಗುತ್ತಿದ್ದು, ಅಪಾಯದ ಪರಿಸ್ಥಿತಿಗೂ ಕಾರಣವಾಗುತ್ತಿದೆ. ಈ ಸ್ಥಳವು ಪಂಜ ಕಡೆಗೆ ಹೋಗುವ ರಸ್ತೆಯೂ ತಾಗಿಕೊಂಡಿರುವುದರಿಂದ,
ಮೂರು ಪ್ರಮುಖ ದಿಕ್ಕುಗಳಿಂದ ವಾಹನಗಳು ಸೇರಿದ ಹೆದ್ದಾರಿ ಸಂಪರ್ಕದ ಮಧ್ಯದಲ್ಲಿ ಬಸ್ ನಿಲ್ದಾಣ ಇರುವುದೇ ಪ್ರಮುಖ ಸಮಸ್ಯೆ ಎಂದು ಸ್ಥಳೀಯರು ವಿವರಿಸಿದರು.
ಈ ವಿಷಯವನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಸಚಿವರು ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, "ಹೊಸ ಬಸ್ ನಿಲ್ದಾಣಕ್ಕೆ ಭೂಮಿ ಈಗಾಗಲೇ ನಿಗದಿಯಾಗಿದ್ದು, ಆದರೆ ಅದಕ್ಕೆ ಸಂಪರ್ಕ ಹೊಂದುವ ರಸ್ತೆಯಲ್ಲಿ ಖಾಸಗಿ ಕಟ್ಟಡವೊಂದು ಅಡ್ಡಿಯಾಗಿದ್ದು, ಯೋಜನೆ ಮುಂದುವರಿಯಲು ವಿಳಂಬವಾಗಿದೆ" ಎಂದು ಹೇಳಿದರು.
ಅವರಿಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿಯವರು, "ಭೂ ಒತ್ತುವರಿ ಮಾಡಿ ತಕ್ಷಣ ಹೊಸ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭಿಸಬೇಕು" ಎಂದು ನೇರ ಸೂಚನೆ ನೀಡಿದರು. ಕಡಬ ಪೇಟೆಯ ಹೃದಯಭಾಗದಲ್ಲಿರುವ ಈ ಬಸ್ ನಿಲ್ದಾಣದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂಬ ಸ್ಪಷ್ಟ ಸೂಚನೆ ಈ ಮಾತುಗಳಿಂದ ವ್ಯಕ್ತವಾಯಿತು.
Post a Comment