ಕುಕ್ಕೆ ಸುಬ್ರಹ್ಮಣ್ಯ, ಜೂನ್ 26 – ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕುಮಾರಧಾರ ನದಿಯ ನೀರಿನ ಮಟ್ಟವು ಏರಿಕೆಯಾಗಿದೆ.
ಇಂದು ಸಂಜೆ ಸುಮಾರು ಆರು ಗಂಟೆಯ ನಂತರ ನದಿಯಲ್ಲಿ ಜಲಪ್ರವಾಹ ಹೆಚ್ಚಾಗಿದೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.
ಸ್ನಾನಘಟ್ಟದ ಬಳಿಯ ಶೌಚಾಲಯಗಳು ಹಾಗೂ ಸಣ್ಣ ಕಟ್ಟಡಗಳು ನೀರಿನಲ್ಲಿ ಮುಳುಗಿದ್ದು, ನದಿ ದಡದ ಸುತ್ತಮುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರು ನದಿಗೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದು, ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನದಿಪಾತ್ರದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ಸಮಯದಲ್ಲೂ ಭದ್ರತೆಯ ನಿಗಾವಹಿಸಲಾಗಿದೆ.
ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದರೆ, ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರು ಸಹಜವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ವಿನಂತಿಸಲಾಗಿದೆ.
Post a Comment