ಕೋಳಿ ಅಂಗಡಿಗೆ ಹೋಗುತ್ತಿದ್ದ ಯುವಕನ ಮೇಲೆ ಹಲ್ಲೆ: ಮೂರು ಜನರ ವಿರುದ್ಧ ಪ್ರಕರಣ ದಾಖಲು.

ಬಂಟ್ವಾಳ, ಜೂನ್ 22 – ಕೊಯಿಲಾ ಗ್ರಾಮದ 19 ವರ್ಷದ ಪುನೀತ್ ಎಂಬ ಯುವಕನು ದಿನಾಂಕ 22.06.2025 ರಂದು ಸಂಜೆ ತನ್ನ ಮಾವನ ಮಗನೊಂದಿಗೆ ಕೋಳಿ ಅಂಗಡಿಗೆ ಹೋಗುತ್ತಿದ್ದ ವೇಳೆ ಮೂವರು ಯುವಕರಿಂದ ಹಲ್ಲೆಗೆ ಒಳಗಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಒಂದು ತಿಂಗಳ ಹಿಂದೆ ಪುನೀತ್ ಮತ್ತು ಅವಿನಾಶ್ ಎಂಬುವನ ನಡುವೆ ನಡೆದ ತಿಕ್ಕಾಟದ ಹಿನ್ನೆಲೆಯಲ್ಲಿ, ಈ ಘಟನೆ ನಡೆದಿರುವ ಶಂಕೆಯಿದೆ. ಪುನೀತ್ ಅವರ ಹೇಳಿಕೆಯಲ್ಲಿ, ಅವಿನಾಶ್, ರೋಹನ್ ಮತ್ತು ತುಶಾರ್ ಎಂಬವರು ಹೊಂಡಾ ಆಕ್ಟಿವಾದಲ್ಲಿ ಬಂದು, ಅವಾಚ್ಯ ಶಬ್ದಗಳಿಂದ ಬೈದು, ಶಾರೀರಿಕವಾಗಿ ದಾಳಿ ನಡೆಸಿದ್ದು, ಈ ವೇಳೆ ಅವಿನಾಶ್ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನೆಂದು ಆರೋಪಿಸಲಾಗಿದೆ.

ಘಟನೆಯ ಸಮಯದಲ್ಲಿ ಪುನೀತ್ ಅವರ ಮಾವನ ಮಗನಾದ ನಿತೀನ್ ಹಾಗೂ ತುಶಾರ್ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಘಟನೆ ನಂತರವೂ ಆರೋಪಿಗಳು ಪುನೀತ್ ಅವರ ಮನೆ ಬಳಿಗೆ ಬಂದು ಮತ್ತೆ ಹಲ್ಲೆ ನಡೆಸಿದ್ದು, “ನೀನು ಕಂಪ್ಲೆಂಟ್ ಕೊಟ್ಟು ಏನು ಮಾಡುತ್ತೀಯ, ನಾವು ನೋಡುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಪುನೀತ್ ಅವರನ್ನು ಕುಟುಂಬಸ್ಥರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂಗಳು 352, 115(2), 118(1), 351(2), ಜೊತೆಗೆ 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Post a Comment

أحدث أقدم