ಕೊಕ್ಕಡ, ಜುಲೈ 20 ,
ಪೆರಿಯಶಾಂತಿ ರಸ್ತೆಯ ಅರಣ್ಯ ಅಂಚಿನಲ್ಲಿ ಇರುವ ಅನಧಿಕೃತ ಗೂಡಂಗಡಿಗಳನ್ನು ಜುಲೈ 20ರ ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜೂನ್ 27ರಂದು ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದ ಸೂಚನೆಯ ಬೆನ್ನಲ್ಲೇ, ಪೆರಿಯಶಾಂತಿ, ಪಾರ್ಪಿಕಲ್ಲು, ನಿಡ್ಲೆ ಹಾಗೂ ಕುದ್ರಾಯವರೆಗಿನ ಮೀಸಲು ಅರಣ್ಯ ಪ್ರದೇಶಗಳಲ್ಲಿ ರಸ್ತೆ ಬದಿಯ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಮೌಖಿಕ ಸೂಚನೆ ನೀಡಿತ್ತು. ಕೆಲವರು ಜುಲೈ 15ರೊಳಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಭರವಸೆ ನೀಡಿದ್ದರೂ, ಈಗಾಗಲೇ ಗಡುವು ಮೀರಿದರೂ ಇನ್ನೂ ಗೂಡಂಗಡಿಗಳು ತೆರವಾಗಿಲ್ಲ ಎಂದು ಅರಣ್ಯ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಸ್ತುತ ಈ ಭಾಗದಲ್ಲಿ ಕಾಡಾನೆ ಚಲನವಲನ ಹೆಚ್ಚಾಗಿರುವ ಕಾರಣ, ಗೂಡಂಗಡಿಗಳ ಬಳಿ ಇಟ್ಟಿರುವ ಅನನಾಸು, ಹಲಸಿನಹಣ್ಣು ಸೇರಿದಂತೆ ಇತರೆ ಆಹಾರವಸ್ತುಗಳು ಆನೆಗಳನ್ನು ಆಕರ್ಷಿಸುತ್ತಿವೆ. ಇದು ರಾತ್ರಿ ವೇಳೆ ನಡೆಯುವ ಆನೆ ಡ್ರೈವ್ಗೆ ತೊಂದರೆ ಉಂಟುಮಾಡುತ್ತಿದೆ. ಹೀಗಾಗಿ ಆನೆಗಳು ಪೆರಿಯಶಾಂತಿ ಕಡೆಗೆ ಪುನಃ ನುಗ್ಗುವ ಸಂಭವ ಹೆಚ್ಚಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತ ಅಂಗಡಿಗಳಿಂದ ಪ್ರಾಣಿಗಳ ದಾಳಿ ಅಥವಾ ಅವಘಡ ಸಂಭವಿಸಿದರೆ, ಅರಣ್ಯ ಇಲಾಖೆ ಯಾವುದೇ ಹೊಣೆ ಹೊತ್ತಿರುವುದಿಲ್ಲ. ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಗಡುವಿನೊಳಗೆ ಗೂಡಂಗಡಿಗಳನ್ನು ತೆರವುಗೊಳಿಸದಿದ್ದಲ್ಲಿ, ಪೊಲೀಸ್ ಸಹಾಯದೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
إرسال تعليق