ಕುಕ್ಕೆ ಸುಬ್ರಹ್ಮಣ್ಯ, ಜುಲೈ 26: ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದಿ ಪ್ರವಾಹ ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಾರಧಾರ ನದಿ ಭಾರಿ ಮಟ್ಟದಲ್ಲಿ ಉಕ್ಕಿಹರಿಯುತ್ತಿದ್ದು, ಪ್ರಸಿದ್ಧ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.
ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಸಂಚರಿಸುವ ರಾಜ್ಯ ಹೆದ್ದಾರಿ ಭಾಗಗಳು ನೀರಿನಲ್ಲಿ ಮುಳುಗಿದ್ದು, ದರ್ಪಣ ತೀರ್ಥ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಈ ಮೂಲಕ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಬಿಕ್ಕಟ್ಟಿಗೆ ಸಿಲುಕಿದ್ದಾರೆ.
ಎಸ್‌ಡಿಆರ್‌ಎಫ್ ತಂಡ ಇದ್ದರೂ ಯಾವುದೇ ಸ್ಪಂದನೆ ಇಲ್ಲ…!
ಪರಿಸ್ಥಿತಿಯನ್ನು ನಿಭಾಯಿಸಲು ಎಸ್‌ಡಿಆರ್‌ಎಫ್ (SDRF) ತಂಡ ಸುಬ್ರಹ್ಮಣ್ಯ ಲಾಡ್ಜ್ ನಲ್ಲಿ ಇದ್ದರು ಸ್ಪಂದನೆ ನೀಡದಂತಾಗಿದೆ. ಬೋಟ್ ಇದ್ದರೂ ಸ್ಥಳೀಯರಿಗೆ ನೆರವು ನೀಡಲು ಮುಂದಾಗದ SDRF ಸಿಬ್ಬಂದಿ, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಸ್ಪಂದನೆ ಇಲ್ಲ – ತೀವ್ರ ಬೇಸರ ವ್ಯಕ್ತಪಡಿಸಿದ ದೇವಸ್ಥಾನ ಸಮಿತಿ ಅಧ್ಯಕ್ಷ
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸ್ಪಂದನೆ ಲಭಿಸುತ್ತಿಲ್ಲ, ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಮಾಧ್ಯಮದ ಮುಂದೆ ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.
"ಕಡಬ ತಹಶೀಲ್ದಾರರನ್ನು ಸಂಪರ್ಕಿಸಿದರೂ ಅವರು ಫೋನ್ ಎತ್ತಿಲ್ಲ,"
ಎಂಬುದಾಗಿ ಅವರು ಅಸಹನೆಯನ್ನು ಹೊರ ಹಾಕಿದ್ದಾರೆ.
ಸಾರ್ವಜನಿಕರಿಂದ – ಸೂಕ್ತ ಕ್ರಮಕ್ಕೆ ಆಗ್ರಹ
ಪ್ರವಾಹ ಪರಿಸ್ಥಿತಿಯಿಂದ ಜನಜೀವನ ತೀವ್ರವಾಗಿ ವ್ಯತ್ಯಯಗೊಂಡಿದ್ದು, ಈ ರೀತಿಯ ತುರ್ತು ಸಂದರ್ಭದಲ್ಲೂ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಜನತೆಯ ನಿರಾಶೆಗೆ ಕಾರಣವಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಸಮಾಜ ಸೇವಕರು ಆಗ್ರಹಿಸುತ್ತಿದ್ದಾರೆ.
Post a Comment