ಮಂಗಳೂರು, ಜುಲೈ 23: ಮಂಗಳೂರು ಕೇಂದ್ರ ಜೈಲಿನಲ್ಲಿ ವಿಚಾರಣಾಧೀನ ಕೈದಿಗೆ ಹಲ್ಲೆ ನಡೆಸಿ ಹಣ ವಸೂಲಿ ಮಾಡಿದ ನಾಲ್ವರು ಕೈದಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಅಧಿನಿಯಮ (KCOCA) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆರೋಪಿತರನ್ನು ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರಾ ಅಲಿಯಾಸ್ ದಿಲ್ಲು, ಲಾಯಿ ವೇಗಸ್ ಅಲಿಯಾಸ್ ಲಾಯ್ ಮತ್ತು ಸಚಿನ್ ತಲಪಾಡಿ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಬಾರ್ಕೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಸಂಖ್ಯೆ 76/2025 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 308(4) ಮತ್ತು 3(5) ಅಡಿಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು.
ಘಟನೆ ಹೀಗಿದೆ:
ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿ ಬಂಧಿಯಾಗಿರುವ ಮಿಥುನ್ ಎಂಬಾತನನ್ನು ಜುಲೈ 9ರಂದು ಸಿಬ್ಬಂದಿಯ ಕಣ್ಣು ತಪ್ಪಿಸಿ ಮೇಲ್ಕಂಡ ನಾಲ್ವರು ಆರೋಪಿಗಳು ಹಲ್ಲೆಗೊಳಪಡಿಸಿ, ₹50,000 ಹಣಕ್ಕಾಗಿ ಒತ್ತಾಯಿಸಿದ್ದರು. ಅಲ್ಲದೆ ಈ ಕುರಿತು ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಪ್ರಾಣಹಾನಿ ಎಡವಿಸುವಂತೆ ಬೆದರಿಕೆ ಹಾಕಿದ್ದರು.
ಭೀತಿಗೊಳಗಾದ ಮಿಥುನ್, ಈ ವಿಚಾರವನ್ನು ಗುಟ್ಟಾಗಿ ಉಳಿಸಿಕೊಂಡು, ಆರೋಪಿಗಳಲ್ಲಿ ಒಬ್ಬನಾದ ಸಚಿನ್ ನೀಡಿದ ಎರಡು ಮೊಬೈಲ್ ಸಂಖ್ಯೆಗೆ ತನ್ನ ಪತ್ನಿಯಿಂದ ₹20,000 ಹಣವನ್ನು ಫೋನ್ ಪೇ ಮೂಲಕ ವರ್ಗಾಯಿಸಿದ್ದ ಎನ್ನಲಾಗಿದೆ.
ಪರೀಕ್ಷೆ ವೇಳೆ ಪ್ರಕರಣ ಬೆಳಕಿಗೆ
ಜುಲೈ 12ರಂದು ಮಂಗಳೂರು ಸಹಾಯಕ ಪೊಲೀಸ್ ಆಯುಕ್ತರು ಮತ್ತು ಬಾರ್ಕೆ ಠಾಣಾ ಸಿಬ್ಬಂದಿ ಜೈಲಿಗೆ ಭೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂತು. ಬಳಿಕ ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣಬಸಪ್ಪ ಬಾರ್ಕೆ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾನೂನು ಕ್ರಮ ಆರಂಭಿಸಲಾಗಿದೆ.
ಕೆ-ಕೋಕಾ ಅಡಿ ಪ್ರಕರಣ
ಈ ನಾಲ್ವರು ಆರೋಪಿಗಳು ಈಗಾಗಲೇ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ KCOCA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯಡಿ ಕನಿಷ್ಠ 5 ವರ್ಷಗಳಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಅವರು ಎಸಗಿದ ಕ್ರಿಯೆಯಿಂದ ಯಾವುದೇ ವ್ಯಕ್ತಿಯ ಸಾವು ಸಂಭವಿಸಿದರೆ, ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ.
KCOCA ಕಾಯ್ದೆಯ ಪ್ರಕಾರ, ಸಂಘಟಿತ ಅಪರಾಧ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿಗೆ, ಹಿಂದಿನ ಅಪರಾಧ ದಾಖಲೆ ಇಲ್ಲದಿದ್ದರೂ ಸಹ, ಕನಿಷ್ಠ 5 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು.
ತನಿಖಾಧಿಕಾರಿ ನೇಮಕ:
ಈ ಪ್ರಕರಣವನ್ನು DSP ಮಟ್ಟದ ಅಧಿಕಾರಿಯೇ ತನಿಖೆ ನಡೆಸಬೇಕೆಂದು ಕಾಯ್ದೆ ಸ್ಪಷ್ಟಪಡಿಸಿದ್ದು, ತನಿಖೆಗೆ ಮಂಗಳೂರು ಉತ್ತರ ವಲಯದ ACP ಶ್ರೀ ಶ್ರೀಕಾಂತ್ ಅವರನ್ನು ನೇಮಕ ಮಾಡಲಾಗಿದೆ.
إرسال تعليق