ನಕಲಿ ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ದಾಖಲೆ ಸೃಷ್ಠಿ: ಪೃಥ್ವಿರಾಜ್ ಶೆಟ್ಟಿ ಬಂಧನ.

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳ ನಕಲಿ ಸೃಷ್ಠಿ ಹಾಗೂ ವಂಚನೆ ಪ್ರಕರಣದಲ್ಲಿ ಪೃಥ್ವಿರಾಜ್ ಶೆಟ್ಟಿ ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಜುಲೈ 25ರಂದು ಬಂಧಿಸಿದ್ದಾರೆ.

ಕಂಕನಾಡಿ ಠಾಣಾ ವ್ಯಾಪ್ತಿಯ "ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್" ಅಂಗಡಿಯ ಮಾಲೀಕರಾದ ಬಾಲಕೃಷ್ಣ ಸುವರ್ಣ ಅವರು ತಮ್ಮ ಉದ್ದಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ದಾಖಲಾತಿಗಳು ನವೀಕರಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದರೆ, ಅವರ ಬಳಿ ಸದ್ಯದ ಉದ್ದಿಮೆ ಪರವಾನಿಗೆ ಮತ್ತು ತೆರಿಗೆ ರಶೀದಿಗಳ ನಕಲಿ ಪ್ರತಿಗಳು ಇರುತ್ತದೆ.

ವಿಚಾರಣೆ ವೇಳೆ ಈ ದಾಖಲೆಗಳನ್ನು ಪೃಥ್ವಿರಾಜ್ ಶೆಟ್ಟಿ @ ಮುನ್ನ ಎಂಬಾತನು ರೂಪಿಸಿ ನೀಡಿದ್ದನು ಎಂಬ ಮಾಹಿತಿ ಲಭಿಸಿತು. ಈತನಿಂದ ₹27,990 ಹಣ ಪಡೆದು ನಕಲಿ ದಾಖಲೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಇದೆ.

ಇದೇ ರೀತಿಯಲ್ಲಿ ಪಂಪ್ ವೆಲ್‌ನ ಲಕ್ಷ್ಮೀ ಹಾರ್ಡ್‌ವೇರ್ ಅಂಗಡಿಯ ಮಾಲೀಕರಾದ ದೇವಾಂಗ್ ಕೆ. ಪಟೇಲ್ ಅವರಿಗೂ ಈತನು ನಕಲಿ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನೀಡಿದ್ದನು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣವೂ ದಾಖಲಾಗಿದೆ.

ಆರೋಪಿ ವಿವರ:
ಹೆಸರು: ಪೃಥ್ವಿರಾಜ್ ಶೆಟ್ಟಿ @ ಮುನ್ನ
ವಯಸ್ಸು: 25 ವರ್ಷ
ತಂದೆ: ಗಣೇಶ್ ಶೆಟ್ಟಿ
ನಿವಾಸ: ಬೈಕ್ ಕ್ಲಿನಿಕ್ ಹತ್ತಿರ, ಉಜ್ಜೋಡಿ, ಮಂಗಳೂರು

ಆರೋಪಿ ಬಂಧನಕ್ಕೆ ಮೊದಲು ಕೇರಳದ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ. ತನಿಖಾ ದಳವು ತಂತ್ರಬದ್ಧವಾಗಿ ಕಾರ್ಯಾಚರಣೆ ನಡೆಸಿ, ಅವನನ್ನು ಕಿನ್ನಿಗೊಳಿಯಲ್ಲಿ ಪತ್ತೆಹಚ್ಚಿ ಬಂಧಿಸಿದೆ.
ಆರೋಪದ ಮಾದರಿ:
ಆರೋಪಿಯು ಮಂಗಳೂರು ಮಹಾ ನಗರ ಪಾಲಿಕೆಯ ವೆಬ್‌ಸೈಟ್‌ಗಳಿಗೆ ಲಾಗಿನ್ ಆಗಿ, OTP ಮೂಲಕ ಹಿಂದಿನ ದಾಖಲೆಗಳನ್ನು ಡೌನ್‌ಲೋಡ್ ಮಾಡಿ, ದಿನಾಂಕ ಹಾಗೂ ಮಾಹಿತಿ ಎಡಿಟ್ ಮಾಡುತ್ತಿದ್ದ. ಇದನ್ನು 3rd party ಅಪ್ಲಿಕೇಶನ್‌ಗಳ ಮೂಲಕ ನಕಲಿ ರಶೀದಿಗಳಾಗಿ ರೂಪಿಸಿ ಪ್ರಿಂಟ್ ಮಾಡಿ ನೀಡುತ್ತಿದ್ದ.
ಸಾಕ್ಷ್ಯಗಳ ಜಪ್ತಿ:
ಆರೋಪಿಯು ನಕಲಿ ದಾಖಲೆ ಸೃಷ್ಠಿಗೆ ಬಳಸಿದ ಸಲಕರಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮುಂದಿನ ತನಿಖೆ:
ಈತನಿಂದ ಇನ್ನಷ್ಟು ಜನರು ವಂಚಿತರಾಗಿರುವ ಸಾಧ್ಯತೆಗಳ ಕುರಿತು ಕಂಕನಾಡಿ ಹಾಗೂ ಬರ್ಕೆ ಠಾಣೆಗಳು ತನಿಖೆ ಮುಂದುವರಿಸಿವೆ.

Post a Comment

Previous Post Next Post