ಪುತ್ತೂರಿನಲ್ಲಿ ಅಪ್ರಾಪ್ತರ ವಿರುದ್ಧ ಅಪಮಾನಕಾರಿ ವಿಡಿಯೋ ಪ್ರಸಾರ – ಇಬ್ಬರು ಆರೋಪಿತರು ಬಂಧನ.

ಪುತ್ತೂರು: ಅಪ್ರಾಪ್ತ ಬಾಲಕ ಹಾಗೂ ಬಾಲಕಿಯ ವಿರುದ್ಧ ಅಕ್ರಮವಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣೆಯು ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ಪ್ರಯತ್ನಕ್ಕೆ ಪೊಲೀಸರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.



ಪ್ರಕರಣದ ವಿವರಗಳಂತೆ, ಜುಲೈ 5 ರಂದು ಮಧ್ಯಾಹ್ನ, ಪುತ್ತೂರು ಕಸ್ಬಾ ಗ್ರಾಮದ ಬೀರಮಲೆ ಬೆಟ್ಟದ ಬಳಿ, ತನ್ನ ಸ್ನೇಹಿತೆಯೊಡನೆ ಕುಳಿತಿದ್ದ ಅಪ್ರಾಪ್ತ ಬಾಲಕನಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ತಡೆಹಿಡಿದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ, ವಿಡಿಯೋ ಮಾಡಿ "ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆ" ಎಂಬ ಬೆದರಿಕೆ ಕೂಡ ಹಾಕಿದ್ದಾರೆ. ಅಲ್ಲದೆ, ಬಾಲಕನ ಧರ್ಮವನ್ನು ಉಲ್ಲೇಖಿಸಿ ಆತನನ್ನು ಬಹಿರಂಗವಾಗಿ ಅವಮಾನಿಸಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ವಿಡಿಯೋವನ್ನು ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹರಡಲಾಗಿದ್ದು, ಇದು ಕೋಮು ಭಾವನೆಗೆ ಧಕ್ಕೆ ಉಂಟುಮಾಡುವ ರೀತಿಯದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು ಕುದ್ಮಾರು, ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಎಂಬವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023) ಅಡಿ ಹಲವು ಕಲಂಗಳು ಹಾಗೂ ಪಿಡಿಪೋ (POCSO) ಸಂಬಂಧಿತ ಕಾಯ್ದೆಗಳಂತೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿತರಿಂದ ತನಿಖೆ ಮುಂದುವರಿಸುತ್ತಿದ್ದು, ಕಾನೂನು ಕ್ರಮ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಚನೆ: ಘಟನೆಯಲ್ಲಿರುವ ಬಾಲಕರು ಅಪ್ರಾಪ್ತರಾಗಿರುವುದರಿಂದ, ಸಾರ್ವಜನಿಕರು ಮತ್ತು ಮಾಧ್ಯಮಗಳು ಈ ಕುರಿತು ವರದಿ ನೀಡುವಾಗ ಬಾಲ ನ್ಯಾಯ ಕಾಯ್ದೆ 2015 ಹಾಗೂ ಸಂಬಂಧಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Post a Comment

أحدث أقدم