ಶತಾಯುಷಿಗಳಾದ ಮಾಳಿಗೆ ಡಾಕ್ಟರ್ ರಾಮಚಂದ್ರ ಭಟ್: ಜೀವದ ಜೀವಾಳರಾದ ವೈದ್ಯರಿಗೆ ನಮನ
– ಟಿ. ನಾರಾಯಣ ಭಟ್, ರಾಮಕುಂಜ
ಉಪ್ಪಿನಂಗಡಿ:ಒಬ್ಬ ವೈದ್ಯನು ಔಷಧಿ ಕೊಡುವುದು ಮಾತ್ರವಲ್ಲ, ಮಮತೆಯ ಮಾತುಗಳಿಂದ ಜೀವ ಉಳಿಸಿದರೆ, ಅಂತಹ ವೈದ್ಯನು ದೇವರ ದೂತರೇ ಸರಿ. ಅಂತಹ ಒಂದು ದಿವ್ಯ ವ್ಯಕ್ತಿತ್ವ, ನಮ್ಮ ಉಪ್ಪಿನಂಗಡಿಯ ಹೆಮ್ಮೆ, ಹಿರಿಯ ವೈದ್ಯ ಡಾ. ರಾಮಚಂದ್ರ ಭಟ್ ಅವರು ಶತಾಯುಷಿ ಆಗಿರುವ ಸಂತೋಷದ ಕ್ಷಣವಿದು.
ಅವರು ಕೇವಲ ಆಸ್ಪತ್ರೆಯ ಎರಡು ಗೋಡೆಗಳ ಮಧ್ಯೆ ಸೀಮಿತರಾದವರು ಅಲ್ಲ. ಕಾಲ್ನಡಿಗೆಯಲ್ಲಿ, ಬಸ್ಸಿನಲ್ಲಿ, ದೋಣಿಯಲ್ಲಿ, ಮಡಲಿನ ಸೂಟೆ ಹಿಡಿದು ಜನರ ಮನೆ ಹೋಗಿ ಕಷ್ಟದಲ್ಲಿ ಇದ್ದವರಿಗೆ ಚಿಕಿತ್ಸೆ ನೀಡಿದ ಡಾಕ್ಟರ್, ಮನೆ ಮನೆಗೆ ಹೋಗಿ, ಔಷಧಿಯ ಜೊತೆಗೆ ನಗುಮೊಗದಿಂದ ಆರೈಕೆ ನೀಡಿದವರು.ಎಲ್ಲರೂ ಹೆಮ್ಮೆಪಡುವಷ್ಟು "ನಮ್ಮ ಡಾಕ್ಟರ್" ಎಂಬ ಹೆಸರು ಅವರು ಗಳಿಸಿದ್ದಾರೆ. ರೋಗಿಗೆ ಔಷಧಿಯಷ್ಟೇ ಅಲ್ಲ, ಕಷ್ಟದಲ್ಲಿ ಇದ್ದವರಿಗೆ ಧನಸಹಾಯ ಹಾಗೂ ಆಹಾರವನ್ನೂ ನೀಡಿ ಬದುಕು ನೀಡಿದ ಉದಾತ್ತ ಹೃದಯ ಅವರದ್ದು.
ಮಾಳಿಗೆ ಡಾಕ್ಟರ್ ಎಂಬ ಹೆಸರು:
ಅವರು ಖಾಸಗಿ ಆಸ್ಪತ್ರೆ, ವೈಭೋಗದ ಬಂಗಲೆ ಕಟ್ಟಲಿಲ್ಲ. ಮಕ್ಕಳನ್ನು ವಿದೇಶಗಳಿಗೆ ಕಳುಹಿಸಲಿಲ್ಲ. ನಮ್ಮೂರಲ್ಲಿಯೇ, ಅದೇ ಉಪ್ಪಿನಂಗಡಿಯಲ್ಲಿಯೇ ಬದುಕು ಕಟ್ಟಿಕೊಂಡರು. ಕುಟುಂಬವನ್ನೂ ಕೂಡ ಸೇವಾ ಮನೋಭಾವದಿಂದ ಬೆಳೆಸಿದರು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳೂ ಆರೋಗ್ಯ ಕ್ಷೇತ್ರದಲ್ಲೇ ಸೇವೆಯಲ್ಲಿರುವುದು ನಮ್ಮೆಲ್ಲರ ಭಾಗ್ಯ ಎಂದೇ ಹೇಳಬೇಕು.
ವೈದ್ಯಕೀಯ ಕ್ಷೇತ್ರದಲ್ಲಿ ದೇವದೂತರಾಗಿದ್ದವರು:
ಅನೇಕ ಜೀವಗಳನ್ನು ಸಾವಿನಿಂದ ಕಾಪಾಡಿದ ಈ ಹಿರಿಯ ವೈದ್ಯ, ನಿಜವಾದ ಸೇವಾ ಧರ್ಮವನ್ನು ನಡೆದು ತೋರಿದವರು. ಶತಮಾನದ ಸೇವಾ ಸಂಚಯದ ಹಿಂದೆಯೇ ಸಾವಿರಾರು ಜನರ ಆಶೀರ್ವಾದ ಇತ್ತು. ನಮ್ಮ ಕಣ್ಣ ಮುಂದೆ ಜೀವಂತ ದಂತಕಥೆಯಂತೆ ಹಳ್ಳಿಯಿಂದ ಹಳ್ಳಿಗೆ ಓಡಿದ ಈ ವೈದ್ಯರು, ನಿಜವಾದ ಮಾನವೀಯತೆಯ ಪ್ರತಿರೂಪ.
ಇಂದು ಅವರು ಶತಾಯುಷಿ ಆಗಿರುವ ಈ ಕ್ಷಣದಲ್ಲಿ, ಅವರ ಸೇವೆಯನ್ನು ಸ್ಮರಿಸೋಣ. ಅವರು ಆರೋಗ್ಯವಂತರಾಗಿರಲಿ, ಚಿರಾಯುಷಿಯಾಗಿರಲಿ ಎಂಬುದೇ ನಮ್ಮ ಹಾರೈಕೆ. ನಮ್ಮ ನಾಡು, ನುಡಿ, ನಾಡಿನ ಜನರು ಈ ರೀತಿ ತ್ಯಾಗಮಯ ಸೇವಾ ಜೀವನ ನಡೆಸಿದವರು ನಮ್ಮಲ್ಲಿ ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.
ಡಾ. ರಾಮಚಂದ್ರ ಭಟ್ ಮಾಳಿಗೆ ಡಾಕ್ಟರ್ – ನಿಜವಾದ ಜೀವದ ಜ್ಯೋತಿ.
إرسال تعليق