ಆ.15 ರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ – “ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ” ಅಭಿಯಾನಕ್ಕೆ ಚಾಲನೆ.

ಸುಬ್ರಹ್ಮಣ್ಯ: ನಾಗಾರಾಧನೆಯ ಮಹಾತೋಭಾರ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆ.15 ರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಆದೇಶ ಹಾಗೂ ರಾಜ್ಯ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದ್ದು, “ನಮ್ಮ ನಡೆ ಪ್ಲಾಸ್ಟಿಕ್ ಮುಕ್ತದೆಡೆ” ಅಭಿಯಾನಕ್ಕೆ ಇದೇ ದಿನ ಚಾಲನೆ ನೀಡಲಾಗುತ್ತದೆ.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ – “ಪ್ಲಾಸ್ಟಿಕ್ ಆರೋಗ್ಯಕ್ಕೂ ಪರಿಸರಕ್ಕೂ ಹಾನಿಕಾರಕ. ಭಕ್ತರು, ಸಾರ್ವಜನಿಕರು, ವ್ಯಾಪಾರಸ್ಥರು ಎಲ್ಲರೂ ಸಹಕಾರ ನೀಡಿದರೆ ಪ್ಲಾಸ್ಟಿಕ್ ಮುಕ್ತ ಕ್ಷೇತ್ರ ನಿರ್ಮಾಣ ಸಾಧ್ಯ.”

ಸರ್ಕಾರದ ಆದೇಶದ ಪ್ರಕಾರ

ಕರ್ನಾಟಕ ಸರ್ಕಾರ ಅಧಿಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಇದರಲ್ಲಿ ನೀರಿನ ಬಾಟಲ್ಗಳು, ಪ್ಲಾಸ್ಟಿಕ್ ಕವರ್‌ಗಳು ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಸಾಮಾಗ್ರಿಗಳು ಸೇರಿವೆ.

ಅಂಗಡಿಗಳಲ್ಲೂ ಪ್ಲಾಸ್ಟಿಕ್ ಬಂದ್

ದೇವಳದ ವ್ಯಾಪ್ತಿಯಲ್ಲಿರುವ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ದೇವಳ ಅಧೀನದ ಎಲ್ಲಾ ಬಾಡಿಗೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ನಿಲ್ಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ದಂಡ, ಅಂಗಡಿ ತೆರವು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನಿಯಮ ಉಲ್ಲಂಘನೆಗೆ ಕ್ರಮ

ಪ್ಲಾಸ್ಟಿಕ್ ಬಳಕೆ ಪತ್ತೆಯಾದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಯ್ದೆಗಳ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು.

ಪ್ಲಾಸ್ಟಿಕ್ ಮುಕ್ತ ಘೋಷಣೆ

ಆ.15ರಂದು ಸ್ವಾತಂತ್ರ್ಯೋತ್ಸವದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳವನ್ನು ಅಧಿಕೃತವಾಗಿ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವೆಂದು ಘೋಷಿಸಲಾಗುವುದು. ಅಭಿಯಾನ ಯಶಸ್ವಿಗೆ ಸರ್ವರ ಸಹಕಾರ ಕೋರಲಾಗಿದೆ.

Post a Comment

أحدث أقدم