ಮಂಗಳೂರು:ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲ್ಪುಗುಡ್ಡೆ ಗ್ರಾಮದಲ್ಲಿರುವ ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಯುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 17 ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ.
ಪೊಲೀಸರು ಸ್ಥಳದಿಂದ ಸುಮಾರು ₹1.92 ಲಕ್ಷ ನಗದು ಹಾಗೂ 18 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಗದು ಮತ್ತು ಸಾಮಗ್ರಿಗಳ ಒಟ್ಟು ಮೌಲ್ಯವು ಸುಮಾರು ₹4 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ ಕೆ ಅವರ ಮಾಹಿತಿಯ ಮೇರೆಗೆ, ಕಾವೂರು ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ಅವರ ನೇತೃತ್ವದಲ್ಲಿ ನಡೆದಿದ್ದು, ಪೊಲೀಸರು ಸ್ಥಳದಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಕಾನೂನು ಪ್ರಕಾರ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿ ಎಎಸ್‌ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತು ಇತರರು ಪಾಲ್ಗೊಂಡಿದ್ದರು.
ಪೊಲೀಸರು ಸಾರ್ವಜನಿಕರಿಗೆ ಅಕ್ರಮ ಜುಗಾರಿ, ಪಣದಾಟಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
Post a Comment