ಬಂಟ್ವಾಳ, ಆ.27 :ಸಜೀಪ ಮುನ್ನೂರು ನಿವಾಸಿ ಉಮರ್ ಪಾರೂಕ್ (48) ಎಂಬವರು ಕೊಲೆ ಯತ್ನವಾಗಿದೆ ಎಂಬಂತೆ ನೀಡಿದ ದೂರು ಸುಳ್ಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೂಲ ಮಾಹಿತಿ ಪ್ರಕಾರ, ದಿನಾಂಕ 11.06.2025 ರಂದು ಮುಂಜಾನೆ ಜೀಪ್‌ನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆ ತೆರಳುತ್ತಿದ್ದಾಗ, ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದರು ಎಂದು ಉಮರ್ ಪಾರೂಕ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದಾಗಿ ಅ.ಕ್ರ.68/2025, ಕಲಂ 109, 324(4) ಜೊತೆ 3(5) BNS-2023 ರಂತೆ ಪ್ರಕರಣ ದಾಖಲಾಗಿತ್ತು.
ಆದರೆ, ಪೊಲೀಸ್ ತನಿಖೆಯಲ್ಲಿ ಪ್ರಕರಣವು ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದ್ದು, ಈ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ತನಿಖೆಯ ನಂತರ ಉಮರ್ ಪಾರೂಕ್ ಅವರು ಸಾರ್ವಜನಿಕರನ್ನು ಪ್ರಚೋದಿಸಿ, ಗಲಭೆ ಉಂಟಾಗುವಂತೆ ಮಾಡಿದ್ದು, ಭಯಭೀತಿಯನ್ನು ಸೃಷ್ಟಿಸಿದ್ದು, ಜೊತೆಗೆ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2025, ಕಲಂ 192, 353(1)(b), 230(1), 248(A) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಉಮರ್ ಪಾರೂಕ್ ಅವರನ್ನು ದಸ್ತಗಿರಿ ಮಾಡಿ ಬಂಟ್ವಾಳದ ಎಸಿಜೆ ಮತ್ತು ಜೆಎಂಪಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಮಾನ್ಯ ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 6, 2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
Post a Comment