ಗೋಹತ್ಯೆ ಪ್ರಕರಣ ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ.

ಬಂಟ್ವಾಳ :ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕೆರೆ ಬಳಿ ಗೋಹತ್ಯೆ ನಡೆದಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ.

ಸೆಪ್ಟೆಂಬರ್ 21ರಂದು ನಡೆದ ದಾಳಿಯಲ್ಲಿ ನಾಸಿರ್ @ ಹುಸೇನಬ್ಬ (ಸಂಗಬೆಟ್ಟು), ರಶೀದ್ ಹಾಗೂ ಇತರರು ದನವನ್ನು ಕತ್ತಿ–ಚೂರಿ ಬಳಸಿ ವಧೆ ಮಾಡುತ್ತಿದ್ದ ವೇಳೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಸುತ್ತುವರೆದಾಗ ಆರೋಪಿಗಳು ಓಡಿ ಹೋಗಿದ್ದು, ತೌಸೀಫ್ (ವಿಳಾಸ: ಕೃಷ್ಣಾಪುರ, ಸುರತ್ಕಲ್, ಮಂಗಳೂರು) ಎಂಬಾತನನ್ನು ಸ್ಥಳದಲ್ಲಿಯೇ ಬಂಧಿಸಿದರು.

ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಸುಮಾರು 6 ವರ್ಷದ ಹಸುವೊಂದನ್ನು ವಧೆ ಮಾಡಿರುವುದಲ್ಲದೆ, ವಧೆಗೆಂದು ಕಟ್ಟಿ ಹಾಕಿದ್ದ 9 ದನಗಳನ್ನು ಪೊಲೀಸರು ರಕ್ಷಿಸಿ ಗೋಶಾಲೆಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಳಸಿದ್ದ KA19AE1337 ನಂಬರಿನ ಆಟೋ ರಿಕ್ಷಾವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 143/2025 ಕಲಂ 303(2), 307 ಬಿ.ಎನ್‌.ಎಸ್ ಜೊತೆಗೆ ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಕಾಯ್ದೆ 2020ರ ಕಲಂ 4,7,12 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ತೌಸೀಫ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

👉 ಈ ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆ ಶ್ಲಾಘನೀಯವಾಗಿದೆ.

Post a Comment

Previous Post Next Post