*ಮಠದ ಸೇವೆಯಲ್ಲಿ ಬದುಕು ಮುಗಿಸಿದ*
*ದಿI ಗೋವಿಂದಾಚಾರ್ಯರು, ಸುಬ್ರಹ್ಮಣ್ಯ*
**********************
*ನೆನಪುಗಳ ಸಂಕಲನ*
ಮಠ ಮತ್ತು ಮಂದಿರಗಳ ( ದೇವಾಲಯ) ಆರಾಧನಾ ವಿಧಿಗಳಲ್ಲಿ ಕೆಲವೊಂದು ಸಾಮ್ಯತೆಗಳಿದ್ದರೂ ಉದ್ದೇಶಗಳಲ್ಲಿ ಭಿನ್ನತೆಗಳಿವೆ. ಮಂದಿರ ಅಥವಾ ದೇವಾಲಯಗಳು ಸಮಸ್ತ ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳು. ಶಿವ - ವಿಷ್ಣು -ದೇವಿ ಮುಂತಾದ ದೇವಾಲಯಗಳಿದ್ದರೂ ಒಂದಲ್ಲ ಒಂದು ಉದ್ದೇಶಕ್ಕಾಗಿ ಸಮಸ್ತ ಭಕ್ತ ಸಮೂಹ ಭಕ್ತಿಯಿಂದ ದರ್ಶನ ಪಡೆಯುವರು. ಆದರೆ ಮಠಗಳಲ್ಲಿ ನಡೆಯುವ ದೇವತಾರಾಧನೆ ವಿಭಿನ್ನವಾಗಿರಬಹುದು. ಸಂಪ್ರದಾಯಗಳು ಪ್ರತ್ಯೇಕವಾಗಿರಬಹುದು. ಬರುವ ಭಕ್ತರು ಸೀಮಿತ ಸಂಖ್ಯೆಯಲ್ಲಿರಬಹುದು.
ಅನೇಕ ಋಷಿ ಮುನಿಗಳು ಮಠ -ಆಶ್ರಮಗಳ ಕಟ್ಟಿ ಆಧ್ಯಾತ್ಮ ಸಾಧನೆ ಮಾಡಿರುವರು. ಶಿಷ್ಯ ಪರಂಪರೆ ಬೆಳೆಸಿರುವರು.ಈ ಜಗತ್ತು ಹೇಗೆ ಉದಯಿಸಿತು,ವಿಕಾಸ ಹೊಂದಿತು , ಮಾನವೀಯತೆಯ ಉದ್ದಿಪನ ಹೇಗೆ ಸಾಧ್ಯ? ಸಂಸ್ಕಾರ ಸಂಸ್ಕೃತಿಗಳು ತಲೆತಲಾಂತರ ಪ್ರವಹಿಸಲು ಏನು ಮಾಡಬೇಕು ?ಮನುಷ್ಯನ ಚಂಚಲ ಚಿತ್ತವನ್ನು ಅಂಕೆಯಲ್ಲಿ ಇಡುವುದು ಹೇಗೆ ? ಮನಸ್ಸಿನಲ್ಲಿರುವ ಅಗಾಧ ಶಕ್ತಿಯನ್ನು ಸಮಾಜ ಕಲ್ಯಾಣಾರ್ಥವಾಗಿ ಬಳಸುವುದು ಹೇಗೆ...... ಎಂಬುದನ್ನು ತಮ್ಮ ಅನುಭವಗಳಿಂದ ಋಷಿ- ಮುನಿಗಳು ನಿರೂಪಿಸಿದರು. ಅವುಗಳೆ ವೇದ- ವೇದಾಂತಗಳು, ರಾಮಾಯಣ - ಮಹಾಭಾರತ, ಪುರಾಣ - ಪುಣ್ಯಕಥೆಗಳು. ಇವುಗಳು ಸಾಕಾರಗೊಳ್ಳಲು ಮಠ ಮಂದಿರಗಳು ಅವಶ್ಯ.
ಹಿಂದೂ ಧರ್ಮದಲ್ಲಿ ಅನೇಕ ಜಾತಿ -ಮತ- ಪಂಥಗಳಿವೆ. ಆಚಾರ -ವಿಚಾರಗಳಲ್ಲಿ ಅಭಿಪ್ರಾಯ ಭೇದಗಳಿವೆ. ಇಷ್ಟೊಂದು ದೊಡ್ಡ ಸಮೂಹವನ್ನು ಏಕ ಸೂತ್ರದಿಂದ ಬಂಧಿಸುವುದು ಬಲು ಕಷ್ಟ. ವೈವಿಧ್ಯಮಯ ಆಚಾರ ವಿಚಾರಗಳಿಂದಾಗಿ ಜಾತಿ ಮತಗಳು ಸೃಷ್ಟಿಯಾದವು. ಅವುಗಳೆಲ್ಲ ಸೇರಿ ಒಟ್ಟು ಹಿಂದೂ ಧರ್ಮವಾಗಿದೆ. ಇತರ ಧರ್ಮಗಳಿಗಿಂತ ಇಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಇಲ್ಲಿ ಬಾಗುವಿಕೆ ಇದೆ. ಹೊಂದಾಣಿಕೆ ಇದೆ.
ಅನೇಕ ಇಟ್ಟಿಗೆಗಳು ಒಟ್ಟಿಗೆ ಸೇರಿದಾಗ ಗಟ್ಟಿಮುಟ್ಟಾದ ಕಟ್ಟಡ ನಿರ್ಮಿಸಲು ಸಾಧ್ಯ. ಅಲ್ಲಿರುವ ಎಲ್ಲಾ ಇಟ್ಟಿಗೆಗಳು ಗಟ್ಟಿಮುಟ್ಟಾಗಿದ್ದರೆ ಮಾತ್ರ ಕಟ್ಟಡ ಗಟ್ಟಿಗೊಳ್ಳುವುದು. ಅಂತೆಯೇ ವಿಶಾಲ ಹಿಂದೂ ಸಮಾಜವು ಪ್ರಾಚೀನ ಭಾರತದ ಸಂಸ್ಕೃತಿ ಸಂಸ್ಕಾರಗಳ ಚೌಕಟ್ಟಿನ ಒಳಗೆ, ಮಾನವೀಯತೆಗಳ ಸಾಕಾರಗೊಳಿಸಲು ಬೇಕಾಗಿರುವ ಆಚಾರ ವಿಚಾರಗಳನ್ನು ತಮ್ಮ ಅನುಯಾಯಿಗಳಿಗೆ ತಿಳಿಸಿ ಸಂಘಟಿತ ಸಮಾಜ ಕಟ್ಟಲು ಯತ್ನಿಸಬೇಕು. ಇಂತಹ ವಿಶಾಲ ತಳಹದಿಯಡಿಯಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು, ಕುಲಕಸುಬುಗಳನ್ನು ತಲೆತಲಾಂತರ ಮುನ್ನಡೆಸಲು ಮಠಗಳು ಸ್ಥಾಪನೆಗೊಂಡವು. ಅವುಗಳನ್ನೇ ಗುರುಮಠ ಎನ್ನುವರು.
ಭಾರತ ದೇಶದ ಮಣ್ಣಿನ ಕಣ ಕಣಗಳಲ್ಲೂ ಇಂದಿಗೂ ಆಧ್ಯಾತ್ಮಿಕ ಚಿಂತನೆಗಳು ಹರಿದಾಡುತ್ತಿವೆ. ದೇಶದಾದ್ಯಂತ ಸಹಸ್ರಾರು ಮಠಗಳು ಜೀವಂತವಾಗಿವೆ. ಕಾಲ ಪ್ರಭಾವಕ್ಕೆ ತಕ್ಕಂತೆ ಅನೇಕ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿವೆ. ಪ್ರಾಚೀನ ಸಂಸ್ಕೃತಿಗಳನ್ನು ಬೋಧಿಸುತ್ತಿವೆ. ಸಮಾಜಕ್ಕೆ ಯಾವ ಆದರ್ಶವನ್ನು ತೋರಬೇಕು ಅದೆಲ್ಲವನ್ನು ಮಾಡುತ್ತಿರುವುದನ್ನು ಕಾಣಬಹುದು.
ನಾನು ಹತ್ತಿರದಿಂದ ಕಂಡ ಗುರುಮಠಗಳಲ್ಲೊಂದು ಸುಬ್ರಹ್ಮಣ್ಯ ಮಠ. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ಮಠದಲ್ಲಿ ಅನೇಕರು ಬಾಲಸನ್ಯಾಸಾಶ್ರಮ ಪಡೆದು ಮಠವನ್ನು ಜವಾಬ್ದಾರಿಯುತವಾಗಿ ಮುನ್ನಡೆಸಿರುವರು. ಸನ್ಯಾಸಿಗಳ ಬೆನ್ನೆಲುಬಾಗಿ ಅನೇಕರು ಮಾಡಿದ ತ್ಯಾಗದ ಫಲದಿಂದ ಅನೂಚಾನವಾಗಿ - ಅನೂಹ್ಯಯವಾಗಿ - ಅವಿಚ್ಛಿನ್ನವಾಗಿ ಮಠಗಳು ನಡೆದು ಬಂದಿವೆ. ತೀರಾ ಇತ್ತೀಚಿಗಿನ ತಲೆಮಾರಿನ ಸನ್ಯಾಸಿಗಳಾದ ಶ್ರೀ ವಿದ್ಯಾಭೂಷಣ ತೀರ್ಥರು ಪೀಠಾಧಿಪತಿಯಾಗಿದ್ದ ಕಾಲದಲ್ಲಿ ಮಠದ ದಿವಾನರಾಗಿ ಮಠ ನಡೆಸಲು ಬದುಕು ಸವೆಸಿದ ಗೋವಿಂದಾಚಾರ್ಯರ ಜೀವನ ಕಥನವಿದು.
ಶ್ರೀ ಮಧ್ವಾಚಾರ್ಯರು ಅವತರಿಸಿದ ಪುಣ್ಯ ನೆಲ ಉಡುಪಿಯ ಪಾಜಕ ಕ್ಷೇತ್ರದ ಸಮೀಪದಲ್ಲಿಯೇ ಗೋವಿಂದಾಚಾರ್ಯರ ಹಿರಿಯರು ಜನಿಸಿದರು. ಕುಂಜಾರು ಗಿರಿಯ ಶ್ರೀ ದುರ್ಗಾಪರಮೇಶ್ವರಿಯನ್ನು ಪರಂಪರೆಯಿಂದ ಆರಾಧಿಸಿದರು. ಇವರ ತಂದೆ ಪದ್ಮನಾಭ ಆಚಾರ್ಯರು ಹಾಗೂ ದೊಡ್ಡಪ್ಪ ಲಕ್ಷ್ಮೀನಾರಾಯಣ ಆಚಾರ್ಯರು. ಸುಮಾರು 125 ವರ್ಷಗಳ ಹಿಂದೆ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ನೆಲೆಸಿದರಂತೆ. ಅವರ ಸಹೋದರರು ಇಬ್ಬರು ಬಾಲ ಸನ್ಯಾಸಾಶ್ರಮ ಸ್ವೀಕರಿಸಿ ಪೀಠಾಧಿಪತಿಗಳಾಗಿದ್ದುದರಿಂದ ಮಠ ನಡೆಸಲು ಹಾಗೂ ಸನ್ಯಾಸಿಗಳ ಸೇವೆಗಾಗಿ ಅವರು ಅಲ್ಲೇ ಬಂದು ನೆಲೆಸಿದರು.
ಗೋವಿಂದಾಚಾರ್ಯರು ಹೆಚ್ಚೇನು ಶಾಲಾ ಶಿಕ್ಷಣ ಕಲಿತವರಲ್ಲ.ತಂದೆಯ ಕುಲಕಸುಬನ್ನೇ ಮಕ್ಕಳು ಅನುಸರಿಸುವ ಕಾಲವದು. ಇವರು ಶಾಲೆಬಿಟ್ಟ ನಂತರ ಉಡುಪಿ - ಮೈಸೂರು ಎಂದು ಬಂಧುಗಳ ಮನೆಯಲ್ಲಿದ್ದು, ಗುರುಕುಲದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. ನಾಟಕದ ಗೀಳು ಹತ್ತಿಸಿಕೊಂಡವರು. ಹಾರ್ಮೋನಿಯಂ ಚೆನ್ನಾಗಿ ನುಡಿಸುತ್ತಿದ್ದರು. ಸಿನಿಮಾ ಸೇರಿ ಅಭಿನಯಿಸಬೇಕೆಂಬ ಕನಸು ಕಂಡವರು. ಮಗ ಸಿನೇಮಾ ಸೇರಿ ಕೆಟ್ಟು ಹೋಗುವುದು ಬೇಡವೆಂದು ಭಯಕ್ಕೆ ಬಿದ್ದು ಹಿರಿಯರು ಒಪ್ಪಲಿಲ್ಲ. ಮತ್ತೆ ಊರಿಗೆ ಬರುವಂತೆ ಒತ್ತಾಯಿಸಿದರು. ಬಂದವರು ಒಂದಷ್ಟು ಕಾಲ ತೀರ್ಥಹಳ್ಳಿಯ ಬಾಳಗಾರು ಮಠ ಸೇರಿಕೊಂಡರು. ಮಠದಲ್ಲಿ ಸಂಕೀರ್ತನೆ- ಭಾಗವತಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡರು. ಸ್ವಾಮಿಗಳ ನೆಚ್ಚಿನ ಶಿಷ್ಯರಾದರು. ಯುವಕ- ಮದುವೆಯ ಪ್ರಾಯ - ಮದುವೆ ಮಾಡದೆ ಹೋದರೆ ಇನ್ನೆಲ್ಲಿ ಸಿನಿಮಾ - ನಾಟಕವೆಂದು ಅಲೆದಾನೆಂದು ಹಿರಿಯರು ಭಯ ಪಟ್ಟರು. ಬಾಳಗಾರು ಸಮೀಪದ ಸೀತೂರಿನ ಮಂದಾಕಿನಿ ಯವರನ್ನು, ಮಿತ್ರ ವಾಸುದೇವ ಆಚಾರ್ಯರು ಸಂಧಾನ ನಡೆಸಿ, ಹಿರಿಯರ ಒಪ್ಪಿಸಿ ಮದುವೆ ನಡೆಸಿ ಮಠದಲ್ಲೇ ಜವಾಬ್ದಾರಿ ಹೊರಿಸಿದರು.
ಮಠ ನಡೆಸುವುದು ಅರ್ಧ ಶತಮಾನದ ಹಿಂದೆ ಕಡುಕಷ್ಟದ ಕೆಲಸ. ಮಠಕ್ಕೆ ದಾನಿಗಳು ಉಂಬಳಿ ಬಿಟ್ಟ ಆಸ್ತಿಪಾಸ್ತಿ, ಭೂ ಸುಧಾರಣೆ ಕಾನೂನಿನಂತೆ ಕೈ ಬಿಟ್ಟು ಹೋಯಿತು. ಇದ್ದರೂ ಅದರಿಂದ ಬರುತ್ತಿದ್ದ ಆದಾಯ ಮಠ ನಿರ್ವಹಣೆಗೆ ಏನೇನು ಸಾಲದಾಗಿತ್ತು. ಅಂದು ಜಡಿ ಮಳೆ ಸುರಿಯುವ ಮಳೆಗಾಲ - ಸೇತುವೆ ಮುಳುಗಿ ಹರಿಯುವ ನದಿಗಳು - ಸಂಚಾರ ಸಾಧನಗಳ ಕೊರತೆ ಇಂತಹ ಸಮಸ್ಯೆಗಳಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಜನ ವಿರಳಾತಿವಿರಳ. ಅಲ್ಲಿದ್ದುದು ನಾಲ್ಕಾರು ಅಂಗಡಿ ಮುಂಗಟ್ಟುಗಳು. ಕಾಲೇಜುಗಳಿಲ್ಲ, ವಸತಿಗೃಹ - ಹೋಟೆಲ್ ಗಳಿಲ್ಲ, ಸಂಜೆಯಾಯಿತೆಂದರೆ ಬೀದಿ ದೀಪಗಳಿಲ್ಲ. ಕತ್ತಲೆಯ ಕೂಪ. ಬೀದಿಯಲ್ಲಿ ರಾತ್ರಿ ಜನ ಸಂಚರಿಸದ ಕಾಲವದು.
ಭಕ್ತರಿಂದ ಮಠಕ್ಕೆ ಬರುವ ಆದಾಯಗಳಿಲ್ಲ.ಕೆಲವೇ ಕೆಲವು ಉಪನಯನ - ಮದುವೆ - ಹೋಮ- ಹವನಗಳು ನಡೆದರೆ ನಾಲ್ಕಾರು ಜನರು ಬರುವರು. ಕೈಯಲ್ಲಿ ಸಾಕಷ್ಟು ಕಾಸಿಲ್ಲದ ಭಕ್ತರು, ನೀಡುವ ನಾಲ್ಕು ಕಾಸು ಕೈಗೆ ಬಂದರೆ ಮಠದ ಖರ್ಚು ಒಂದೆರಡು ದಿನಕ್ಕೆ ಸಾಲುವಂತಿತ್ತು. ನಿತ್ಯ ನಿರ್ವಹಣೆಗೆ ಅಂಗಡಿ ಸಾಲ -ಕೈ ಸಾಲವೇ ಗತಿ. ಹಬ್ಬ ಹರಿದಿನಗಳ ನಿರ್ವಹಣೆ ಮಠದ ಗೌರವ - ಘನತೆಗೆ ತಕ್ಕಂತೆ ನಡೆಯಲು ಹರಸಾಹಸ ಪಡಬೇಕಿತ್ತು. ವರ್ಷದ ಅದೆಷ್ಟೋ ದಿನಗಳಲ್ಲಿ ಪತ್ನಿಯ ಕಂಠ ಹಾರಗಳನ್ನು ಬ್ಯಾಂಕಲ್ಲಿ ಅಡವಿಟ್ಟು ಮಠ ನಡೆಸಿದ್ದುಂಟು. ಇವೆಲ್ಲ ಗೋವಿಂದಾಚಾರ್ಯರ ನಿತ್ಯ ಕರ್ಮವಾಗಿತ್ತು.ಅಪರೂಪಕ್ಕೆ ಬರುವ ಭಕ್ತರು ಸ್ವಾಮೀಜಿಯವರಿಗೆ ಭಕ್ತಿಯಿಂದ ಅರ್ಪಿಸುವ ಪಾದ ಕಾಣಿಕೆಗಳು ಮಠ ನಡೆಸಲು ಏನೇನು ಸಾಲದಾಗಿತ್ತು. ಮಠದ ಸಿಬ್ಬಂದಿ- ಆಸುಪಾಸುಗಳಿಂದ ಬರುವ ಭಕ್ತರು ಇವರಿಗೆಲ್ಲ ಊಟ- ಉಪಾಹಾರ ನಡೆಯಬೇಕಿತ್ತು. ಸಿಬ್ಬಂದಿಗಳ ತಿಂಗಳ ಸಂಬಳ, ನಿರ್ವಹಣೆ ಇವೆಲ್ಲವೂ ನಡೆಸಲು ಪಡುತ್ತಿದ್ದ ಪಡಿಪಾಟಲು ಅಷ್ಟಿಷ್ಟಲ್ಲ.
ಮಠವೆಂದರೆ ಕೇವಲ ಪೂಜೆ - ಭೋಜನಗಳಿಗೆ ಸೀಮಿತವಲ್ಲ. ಅಲ್ಲಿ ಒಂದಷ್ಟು ಸಾಂಸ್ಕೃತಿಕ ವೈಭವಗಳು -ಆಧ್ಯಾತ್ಮಿಕ ಚಿಂತನೆಗಳು -ಭಜನೆ ಪೂಜೆ ನಿತ್ಯವೂ ನಡೆದರೆ ಮಠಗಳಲ್ಲಿ ಜನ ಸೇರಬಹುದು. ಸಾನಿಧ್ಯ ವೃದ್ಧಿಸಬಹುದು. ಭಕ್ತರು ಬಂದಾಗಲೇ ಒಂದಷ್ಟು ಕಾಣಿಕೆ- ಸೇವೆಗಳು ನಡೆದು ಮಠ ನಡೆಸಲು ಅನುಕೂಲವಾದೀತು. ಒಂದಷ್ಟು ವೈಭವ ತಂದಿಡಬೇಕೆಂದು ಗೋವಿಂದಾಚಾರ್ಯರು ತನ್ನೊಳಗಿದ್ದ ಸಂಗೀತ - ನಾಟಕದ ಕಂಪನ್ನು ಹೊರಗೆಡಹಿ ಜನಾಕರ್ಷಣೆ ಬೇಕೆಂದು ಟೊಂಕಕಟ್ಟಿ ನಿಂತರು.
ಮಠದ ಸಿಬ್ಬಂದಿ -ಕುಟುಂಬದ ಮಂದಿ - ಪೋಲೀಸ್ - ಪೋಸ್ಟ್ ಮಾಸ್ಟರ್ - ಶಿಕ್ಷಕರು ಇವರೆಲ್ಲರ ತಂಡ ಕಟ್ಟಿದರು. ಐತಿಹಾಸಿಕ -ಪೌರಾಣಿಕ - ಚಾರಿತ್ರಿಕ ನಾಟಕಗಳನ್ನು, ಬಣ್ಣ ಹಚ್ಚಿ -ವೇಷ ತೊಟ್ಟು,ಕುಣಿದು ನಲಿದು ತೋರಿದರು. ನೀಳಕೇಶ ರಾಶಿಯ ಮುಡಿಕಟ್ಟಿ ಪಾತ್ರವಹಿಸಿದರು. ಎತ್ತಿನಗಾಡಿ ಹತ್ತಿ, ಬೀದಿ ಸುತ್ತಿ, ತಗಡಿನ ತುತ್ತೂರಿಯ ಧ್ವನಿವರ್ಧಕದಲ್ಲಿ ಬನ್ನಿರಿ - ನೋಡಿರಿ - ಆನಂದಿಸಿರೆಂದು ಕರೆದು ಕರೆದು ಜನ ಸೇರುವಂತೆ ಮಾಡುತ್ತಿದ್ದರು. ಸಂಜೆಯಾದರೆ ಸಾಕು, ಮನೆಮಂದಿ - ಸಿಬ್ಬಂದಿ ಸೇರಿ ನರಸಿಂಹ ಸ್ವಾಮಿಯ ಪದತಲದಲ್ಲಿ ಕುಳಿತು ಭಜನೆ- ಕೀರ್ತನೆ- ದಾಸರ ಹಾಡು ಹಾಡುತ್ತಿದ್ದರು. ಇದಕ್ಕಾಗಿಯೇ ಶ್ರೀ ವಾಗೀಶ್ವರಿ ಸಂಗೀತ ನಾಟಕ ಸಭಾ ಹವ್ಯಾಸಿ ನಾಟಕ ಸಂಸ್ಥೆ ಕಟ್ಟಿದ ಸಾಹಸಿಗ ಇವರು. ಇವೆಲ್ಲವ ಕಂಡ ಸ್ವಾಮೀಜಿಯವರು ಚಿಕ್ಕ ಸಭಾಭವನವನ್ನು ಕಟ್ಟಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟರು. ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆಯವರು ಅಲ್ಲಿದ್ದ ಕೆಲವು ಪರದೆ- ಪರಿಕರಗಳನ್ನು ದಾನವಾಗಿತ್ತು ಹುರಿದುಂಬಿಸಿದರು. ಅನೇಕ ಚಟುವಟಿಕೆಗಳಿಂದ ಮಠ ಮತ್ತು ಭಕ್ತರ ನಡುವೆ ಸೇತುಬಂಧವಾಯಿತು.
ಪ್ರಮುಖ ಹಬ್ಬ ಹರಿದಿನಗಳೆಂದರೆ ವೈಭವ ಬೇಕಲ್ಲವೇ? ವಾದ್ಯ ಮೇಳದವರು ಭಕ್ತಿ ಪ್ರಧಾನ ಹಾಡುಗಳ ನುಡಿಸಿ ಸಂಚಲನ ಮೂಡಿಸಲು ಶ್ರಮಿಸಿದರೆ, ಗೋವಿಂದಾಚಾರ್ಯರು ಹಾರ್ಮೋನಿಯಂ ಪೆಟ್ಟಿಗೆಯನ್ನು ಕುತ್ತಿಗೆಗೆ ನೇತುಹಾಕಿ, ದಾಸರ ಪದಗಳನ್ನು ತಂಡದೊಂದಿಗೆ ಹಾಡುತ್ತ -ನಲಿಯುತ್ತಾ ರಂಗೇರಿಸುತ್ತಿದ್ದರು. ಪೆಟ್ರೋಮ್ಯಾಕ್ಸ್ ಗ್ಯಾಸ್ ಲೈಟ್ ಬೆಳಕಿನಲ್ಲೇ ಇವೆಲ್ಲ ನಡೆಯುತ್ತಿದ್ದವು. ಹೀಗೆ ಸ್ವಲ್ಪ ಸ್ವಲ್ಪ ಮಠದ ಉತ್ಸವಗಳಿಗೆ ಕಳೆ ತುಂಬಲು ಶುರುವಿಟ್ಟಿತು. ಜನರಿಗೆ ಮಠಕ್ಕೆ ಬರುವಂತೆ ಸ್ಪೂರ್ತಿ ತುಂಬಿದರು.
ಗೋವಿಂದಾಚಾರ್ಯರದು ಆಕರ್ಷಕ ದೈಹಿಕ ನಿಲುವು. ತಲೆಬಾಗಿ ನಮಿಸುವಂತಿದ್ದರು. ಭಾವುಕತೆ ಇಲ್ಲದ ನಿರ್ಮಲ ಭಾವದ ಮುಖ ಮುದ್ರೆ.ತ್ಯಾಗ- ಹೊಂದಾಣಿಕೆಗಳ ಸಂಗಮದಂತಿದ್ದ ನಡೆ-ನುಡಿ. ಮಠದ ಭವ್ಯ ಪರಂಪರೆ ಕಾಪಿಡಲು ಗುರುತು ಕಳಚಿಟ್ಟು ದುಡಿದವರು. ನಿತ್ಯವೂ ಸ್ವರ ಸಂಚಾರದಿಂದ ನಾದ ದೇವತೆಯ ಆರಾಧಿಸುವ ದೈವಭಕ್ತ. ಭಕ್ತರೆಂದರೆ ಎದೆ ಬಿರಿದು ಹೋಗುವಷ್ಟು ಪ್ರೀತಿ. ಸಮಯ ಲೆಕ್ಕಿಸದೆ,ಬರುವ ಭಕ್ತರಿಗೆ ಉಣಿಸಿ ತಿನಿಸುದೆಂದರೆ ಗೋವಿಂದಾಚಾರ್ಯ - ಮಂದಾಕಿನಿ ದಂಪತಿಗಳಿಗೆ ಅದೊಂದು ಯಜ್ಞ ಸಮಾನ. ಜಿಲ್ಲೆಯಾದ್ಯಂತ ಯಾವುದೇ ಗಣ್ಯಾತಿಗಣ್ಯರು ಬರಲಿ ಇವರ ಬಳಿ ಬಾರದೆ ಹೋಗರು. ಸುಬ್ರಹ್ಮಣ್ಯ ಪಟ್ಟಣದಲ್ಲಿ ಎಲ್ಲೇ ಹೋಗಲಿ ಅವರ ಕಾಣುತ್ತಿದ್ದಂತೆ ಎದ್ದು ನಿಂತು ಗೌರವ ಅರ್ಪಿಸುವ ಪರಿ ಕಂಡರೆ ಹೆಮ್ಮೆ ಎನಿಸುತ್ತಿತ್ತು. 1990ರಲ್ಲಿ ಕಾಲವಾದಾಗ ಇಡೀ ಸುಬ್ರಹ್ಮಣ್ಯವೇ ಕಣ್ಣೀರ ಧಾರೆ ಹರಿಸಿತು.
ಪೂಜೆ -ಪುನಸ್ಕಾರ -ಸಂಚಾರ, ಅಧ್ಯಯನ - ಅಧ್ಯಾಪನವೇ ಸ್ವಾಮಿಗಳ ನಿತ್ಯ ಕಾಯಕ. ಮಠದ ಭಕ್ತರು ಬಂದಾಗ ಕುಶಲೋಪರಿಯಲ್ಲಿ ತೊಡಗಬೇಕು.ಸಭೆ- ಸಮಾರಂಭಗಳಿಗೆ ಹೋಗಬೇಕು. ಆಗ ಮಠ ನಡೆಸಲೊಬ್ಬ ಗಟ್ಟಿಗುಂಡಿಗೆಯ, ಎಲ್ಲವನ್ನು ಸಂಭಾಳಿಸುವಾತ ಅಲ್ಲಿದ್ದರೆ ನಡೆದೀತು. ರೊಕ್ಕ ನೋಡಿ ದುಡಿಯುವವರಿಂದ ಅಂತಹ ಉದಾತ್ತತೆ ನಿರೀಕ್ಷೆ ಸಾಧ್ಯವೇ ?.ತನ್ನ ಕರುಳ ಕುಡಿ ಬಾಲ ಸನ್ಯಾಸಿಯು ಬೆಳೆದು ನಿಲ್ಲಬೇಕಿದ್ದರೆ, ಮಠ ಸಂಸ್ಕೃತಿಗೆ ಒಗ್ಗಿಸಬೇಕು - ಬಗ್ಗಿಸಬೇಕು. ಆಧ್ಯಾತ್ಮಿಕ ಪಾಠ ಮತ್ತು ಮಾರ್ಗದರ್ಶನದಿಂದ ಮಾನವ ಸಹಜ ಬಯಕೆ ಬಂಧಿಸಲು ಕಣ್ಣಿಡಬೇಕು. ಚಂಚಲತೆ ಹದ್ದುಬಸ್ತಿನಲ್ಲಿಡಲು ಮನವ ದಂಡಿಸಬೇಕು. ನನ್ನವನೆಂಬ ಅಂತರಂಗದ ಒಲವು ತಂದೆ ತಾಯಿಯಷ್ಟು ಇನ್ನಾರಿಗೆ ಇರಲು ಸಾಧ್ಯ? ಜನಸಾಮಾನ್ಯರು ಅಂದುಕೊಂಡಂತೆ ಸನ್ಯಾಸ ಐಷಾರಾಮಿ ಬದುಕಲ್ಲ. ಸುಖದ ಸುಪ್ಪತ್ತಿಗೆಯಲ್ಲ. ಸಮಾಜದ ಒಳಿತಿಗಾಗಿ ತ್ಯಾಗದ ಬದುಕು. ಇವೆಲ್ಲ ಅರಿತ ಮಂದಿ ಎಷ್ಟಿರುವರು ?
ಮಗನನ್ನು ಮಠದ ಕೈಗಿತ್ತಂತೆ ತಂದೆ ತಾಯಿ ಸಂಬಂಧ ಕಳಚಿ ದೂರ ನಿಲ್ಲುವುದು ಭವಿತವ್ಯಕ್ಕೆ ಮಾರಕವಾಗಬಲ್ಲದೆಂಬ ಭಾವದಿಂದ ತಂದೆ ತಾಯಿ ಮಠ ಸೇರುವುದು ವಾಡಿಕೆಯಾಯಿತು. ಸನ್ಯಾಸಿಯ ಬದುಕಲ್ಲು ಸಂಸಾರಿಗಳು ಕೈಯಾಡಿಸುವರೆಂಬ ಆರೋಪವು ಸದಾ ಇದ್ದುದೇ. ತನ್ನ ಕರುಳ ಕುಡಿ ಪೀಠದಲ್ಲಿರುವಷ್ಟು ದಿನ, ನಾನು ನನ್ನದೆಂಬ ಭಾವ ಬಂಧನ. ನಂತರ ಅರೆಕ್ಷಣವು ಅಲ್ಲಿರದೆ ಖಾಲಿ ಕೈಯಲ್ಲಿ ತೊರೆಯಬೇಕು. ಮಠದ ಸೇವೆಗೆ ನಿಂತವನು ಅರೆಸನ್ಯಾಸಿಯಂತೆ ಬಾಳಿ ಬದುಕಬೇಕು. ಬದುಕು ಸವೆಸಿದ ಆತನ ಭವಿತವ್ಯದ ಬದುಕು ಅನಿಶ್ಚಿತ. ಹೀಗಿದ್ದ ಸಂತ ಸದೃಶ ವ್ಯಕ್ತಿ ಗೋವಿಂದಾಚಾರ್ಯರು.
ಇವರ ಪತ್ನಿ ಮಂದಾಕಿನಿ ಅಮ್ಮನವರು ಪತಿಯ ದಾಸೋಹದಲ್ಲಿ ಜೀವಂತಿಕೆಯ ಸ್ವರೂಪವಿತ್ತವರು. ಭಕ್ತರ ಕಂಡರೆ ಸಾಕು,ಬಾಯಾರಿಕೆ ಕುಡಿಸದೆ ಬಿಡರು. ಊಟದ ಸಮಯ ಊಟ ಮಾಡಿಸದೆ ಬಿಡದಂತಹ ಉದಾರ -ಉದಾತ್ತ ಮನಸ್ಸು. ಹಕ್ಕಿ ಚಿಲಿಪಿಲಿ ಗುಟ್ಟುವ ಮೊದಲೇ ಎದ್ದವರು, ನಡುರಾತ್ರಿಯವರೆಗೂ ಊಟ ಉಪಾಹಾರಗಳ ಉಪಚಾರದಲ್ಲೇ ದೇವರ ಕಂಡವರು. ಸಿಡಿ ಮಿಡಿಗೊಂಡವರಲ್ಲ. ಆಸೆಗಳ ಮಹಲು ಕಟ್ಟಿದವರಲ್ಲ. ದೇವರ ಮೇಲೆ ಭಾರ ಹಾಕಿ ಚಪಲತೆ ನಿಗ್ರಹಿಸಿದವರು. ತೆರೆದ ಮನಸ್ಸು. ನನ್ನಿಂದಲೇ ಎಲ್ಲವೂ ಎಂಬ ಭಾವ ಲವಲೇಶವೂ ಅವರಲ್ಲಿ ಕಾಣದು. ಮಾತಿಗೆ ಮಮತೆ -ಘನತೆ ತುಂಬಿದವರು. ಮನಗಳ ಬೆಸೆದು ಮಠ ನಡೆಸುವಲ್ಲಿ ಪತಿಯ ಒತ್ತಾಸೆಯಾಗಿ ದುಡಿದವರು. ಅವರಿಗೆ ಪ್ರೀತಿಸುವುದು ಸುಲಭವಾಗಿತ್ತು. ದ್ವೇಷಿಸುವುದು ಕಷ್ಟ ಎಂಬಂತಿದ್ದರು . ಮುಕ್ತ ಮನಸ್ಸಿನ ಪ್ರಾಮಾಣಿಕ ದೃಷ್ಟಿ ಆಕೆಯದು. ಜೀವನ ಜಂಜಾಟಗಳಿಂದ ಕಹಿಯಾಗದೆ ತನ್ನ ಮಕ್ಕಳನ್ನು ಬೆಳೆಸಿದರು. ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎಂಬುದಕ್ಕೆ ರೂಪಕದಂತಿದ್ದರು.
*ಕೌಟುಂಬಿಕ ಜೀವನ*
ಗೋವಿಂದಾಚಾರ್ಯರ ಹಿರಿಯ ಪುತ್ರ ವಿದ್ಯಾಭೂಷಣರು. ಮಠೀಯ ಸಂಸ್ಕೃತಿಯಲ್ಲಿ ಬೆಳೆದು ಹಿರಿಯರ ಮನೋರಥದಂತೆ ಇವರು ಸನ್ಯಾಸಾಶ್ರಮ ಸ್ವೀಕರಿಸಬೇಕಾಯಿತು. ಇಪ್ಪತ್ತೆಂಟು ವರ್ಷಗಳ ಕಾಲ ಪೀಠಕ್ಕೆ ಅಪಚಾರವಾಗದಂತೆ ಅನುಷ್ಠಾನ ನಿರತರಾಗಿ ತನ್ನ ಗುರು ಮುಖೇನ ಪೀಠ ತ್ಯಾಗ ಮಾಡಿದರು. ಸಂಸಾರಿಯಾದರು. ಬಳ್ಳಾರಿಯ ರಮಾ ಅವರನ್ನು ವರಿಸಿದರು. ದಾಸರ ಪದಗಳ ಹಾಡುತ್ತಾ ಪುರಂದರದಾಸರಂತೆ ಮೆರೆದರು. ವಿಶ್ವವಿಖ್ಯಾತರಾದರು. ತಂದೆಯವರು ಸಂಗೀತ ಪಾಠದ ನೇರ ಗುರು ಅಲ್ಲದೇ ಹೋದರು ಪ್ರಭಾವಿಸಿದ್ದು ಸತ್ಯ. ಪುರಂದರದಾಸರ ಚಲನ ಚಿತ್ರದಲ್ಲಿ ಪಾತ್ರವಹಿಸಿ ಅಭಿನವ ಪುರಂದರದಾಸರೆಂದೇ ಜನಾನುರಾಗಿಯಾದರು. ಇವರ ಪುತ್ರಿ ಮೇಧಾ ವಿದ್ಯಾಭೂಷಣ ಸಂಗೀತ ಲೋಕದಲ್ಲಿ ಮಿಂಚುತ್ತಿರುವ ಮಿನುಗುತಾರೆ. ಇವರು ಹಾಡುವ ದಾಸರ ಪದಗಳು ಭಕ್ತಿಭಾವ ತುಂಬಿ ಜನಸಾಗರದ ಮನ ಸೆಳೆಯುತ್ತಿವೆ.
ಎರಡನೆಯ ಪುತ್ರ ವೇಣುಗೋಪಾಲ ಆಚಾರ್ಯರು ನಿವೃತ್ತ ಬ್ಯಾಂಕ್ ಅಧಿಕಾರಿ. ಸುಬ್ರಮಣ್ಯದ ಸನಿಹದಲ್ಲೆಲ್ಲಾ ಉದ್ಯೋಗ ನಡೆಸುತ್ತಾ ಮಠದ ಸೇವೆಗಾಗಿ ಅನೇಕ ವರ್ಷಗಳ ಕಾಲ ಬೆನ್ನೆಲುಬಾಗಿ ನಿಂತವರು. ತಂದೆಯ ವೃದ್ಧಾಪ್ಯದಲ್ಲಿ ತನು-ಮನ -ಧನವನ್ನು ಮಠ ನಡೆಸಲು ಸಮರ್ಪಣೆ ಗೈದ ಮಹಾನ್ ದೈವಭಕ್ತ. ಇಂದಿಗೂ ಮಠದ ನಂಟು ಉಳಿಸಿಕೊಂಡಿರುವರು. ಇವರ ಪತ್ನಿ ಸರಸ್ವತಿ.ಪತಿಯ ಜೊತೆ, ಅತ್ತೆಯ ಜೊತೆ ಹೆಗಲೆಣೆಯಾಗಿ ಸೇವೆ ಸಲ್ಲಿಸಿದವರು.
ಮೂರನೆಯವರು ಮುರಳಿಧರ. ನಿವೃತ್ತ ಬ್ಯಾಂಕ್ ಅಧಿಕಾರಿ. ದಾಸರ ಪದಗಳ ಸುಶ್ರಾವ್ಯ ಹಾಡುಗಾರ. ತಂದೆಯ ಜೊತೆಯಾಗಿ ಮಠದ ಸೇವೆಯಲ್ಲಿ ಶ್ರಮಿಸಿರುವರು. ಇವರ ಪತ್ನಿ ಲಾವಣ್ಯ.
ಗೋವಿಂದಾಚಾರ್ಯರಿಗೆ ನಾಲ್ಕು ಹೆಣ್ಣು ಮಕ್ಕಳು. ವಾರಿಜಾ - ಸುಂದರ ಭಟ್, ಚಂದ್ರಿಕಾ - ರಾಮಮೂರ್ತಿ, ನಾಗಮಣಿ -ಜಗನ್ನಾಥ ಐತಾಳ್, ಗಾಯತ್ರಿ -ರಮೇಶ್.
ಇವರ ಇಡೀ ಕುಟುಂಬವೇ ನರಸಿಂಹ ಸ್ವಾಮಿ -ಸುಬ್ರಹ್ಮಣ್ಯ ಸ್ವಾಮಿಯ ಭಜಿಸಿ ಸ್ತುತಿಸಿ ಬೆಳೆದವರು. ಮಠದಲ್ಲಿ ಅನ್ನದಾನ - ಅತಿಥಿಗಳ ಉಪಚಾರ - ಮುಸುರೆ ತಿಕ್ಕಿ, ನಡುಬಗ್ಗಿಸಿ ದುಡಿದವರು. ಎಲ್ಲವೂ ಆ ಮಹಾಸ್ವಾಮಿಗೆ ಅರ್ಪಿತವೆಂದು ಬಾಳಿ ಬದುಕಿದ ಕುಟುಂಬ.
ಸುಬ್ರಮಣ್ಯ ಮಠದ ಇಂದಿನ ಪೀಠಾಧಿಪತಿಗಳು ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥರು. ಮಠವನ್ನು ಸಕಲ ಸೌಕರ್ಯಗಳಿಂದ ಉನ್ನತಿಗೆ ಒಯ್ಯುತ್ತಿರುವರು. ಪೂರ್ವಾಶ್ರಮದ ಸಹೋದರ ಸುದರ್ಶನ ಜೋಯಿಸರು ಮಠದ ಸೇವೆಗೆ ಬದುಕನ್ನು ಮುಡಿಪಾಗಿಟ್ಟವರು.
*ಟಿ ನಾರಾಯಣ ಭಟ್ ರಾಮಕುಂಜ*
*ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*
Post a Comment