ಕರ್ನಾಟಕ ಸರ್ಕಾರ ಘೋಷಿಸಿರುವ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕರಾವಳಿಯ ಹಲವಾರು ಗಣ್ಯರು ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾವಂತರ ಸಾಧನೆಗಳು ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ.
ದಕ್ಷಿಣ ಕನ್ನಡದ ಸಿಂಧು ಗುಜರನ್ ಅವರಿಗೆ ಜಾನಪದ ಕ್ಷೇತ್ರದಲ್ಲಿ ಗೌರವ ದೊರೆತಿದ್ದು, ಪ್ರಸಿದ್ಧ ನಟ ಪ್ರಕಾಶ್ ರಾಜ್ ಅವರನ್ನು ಸಿನಿಮಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
ಸಮಾಜ ಸೇವೆ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಕೊರಿನ್ ರಸ್ಕಿನ್ಹಾ ಮತ್ತು ಉಡುಪಿ ಜಿಲ್ಲೆಯ ಡಾ. ಎನ್. ಸೀತಾರಾಮ್ ಶೆಟ್ಟಿ ಅವರನ್ನು ಪುರಸ್ಕರಿಸಲಾಗಿದೆ.
ದೈವಾರಾಧನಾ ಕ್ಷೇತ್ರದಲ್ಲಿ ಉಮೇಶ್ ಪಂಬಡ, ಮಾಧ್ಯಮ ಕ್ಷೇತ್ರದಲ್ಲಿ ಬಿ.ಎಂ. ಹನೀಫ್, ಯಕ್ಷಗಾನ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೋಟ ಸುರೇಶ್ ಬಂಗೇರ ಹಾಗೂ ಏರ್‌ಬೈಲು ಆನಂದ್ ಶೆಟ್ಟಿ, ರಂಗಭೂಮಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಕಲಾವಿದ ಮೈಮ್ ರಮೇಶ್ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಪುರಸ್ಕೃತರು ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ, ಕಲಾತ್ಮಕ ಹಾಗೂ ಸಾಮಾಜಿಕ ಪರಂಪರೆಯ ಪ್ರತಿನಿಧಿಗಳು ಎಂದು ಹೇಳಬಹುದು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಈ ಸಾಧಕರು ರಾಜ್ಯದ ಹೆಮ್ಮೆಯಂತಾಗಿದ್ದಾರೆ.
ರಾಜ್ಯೋತ್ಸವದ ಸನ್ನಿವೇಶದಲ್ಲಿ ಈ ಗೌರವಗಳು ಕರಾವಳಿ ಪ್ರದೇಶದ ಜನತೆಗೆ ಹೆಮ್ಮೆ ಮತ್ತು ಪ್ರೇರಣೆ ನೀಡುವಂತಿವೆ.
Post a Comment