ಚಿಕ್ಕಮಗಳೂರು, ಅಕ್ಟೋಬರ್ 31:
ಹಸುವಿಗೆ ಸೊಪ್ಪು ತರಲು ತೆರಳಿದ್ದ ಇಬ್ಬರು ಗ್ರಾಮಸ್ಥರು ಕಾಡಾನೆಯ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಇಂದು ಮುಂಜಾನೆ ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ಹರೀಶ್ ಮತ್ತು ಉಮೇಶ್ ಎಂಬ ಗ್ರಾಮಸ್ಥರಾಗಿ ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 6.30 ಗಂಟೆಯ ಸುಮಾರಿಗೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮುಡುಬಾ ಎಲ್ಸಾರ್ ಬಳಿ ಈ ಘಟನೆ ನಡೆದಿದೆ. ಕಾಡಿನೊಳಗೆ ಹಸುವಿಗೆ ಸೊಪ್ಪು ತರಲು ಹೋದ ವೇಳೆ ಏಕಾಏಕಿ ಕಾಡಾನೆಯೊಂದು ಇವರಿಬ್ಬರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. ಜನರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಡು ಪ್ರಾಣಿಗಳ ದಾಳಿಯಿಂದ ಜೀವ ಹಾನಿ ತಡೆಯಲು ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸರ್ಕಾರದ ಕ್ರಮ ನಿರೀಕ್ಷೆಯಲ್ಲಿದೆ.
ಇತ್ತೀಚೆಗಷ್ಟೇ ಮೈಸೂರಿನ ಸರಗೂರಿನಲ್ಲಿ ಹುಲಿಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದ್ದು, ಅದರ ಕೇವಲ ಕೆಲವೇ ಗಂಟೆಗಳೊಳಗೆ ಚಿಕ್ಕಮಗಳೂರಿನ ಈ ಆನೆ ದಾಳಿ ರಾಜ್ಯದಾದ್ಯಂತ ಆತಂಕ ಮೂಡಿಸಿದೆ. ಅರಣ್ಯ ಭಾಗದ ನಿವಾಸಿಗಳು ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿರುವ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
Post a Comment