ಬಂಟ್ವಾಳ, ಅ. 30: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಬಿಸಿಲೆ ಘಾಟ್ ರಸ್ತೆಯಲ್ಲಿ ಅಪಘಾತಕ್ಕೊಳಗಾದ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ದಿನಾಂಕ 30.10.2025 ರಂದು ಮಧ್ಯಾಹ್ನ 1.30 ಗಂಟೆಗೆ, KA.22.C.1382 ಸಂಖ್ಯೆಯ ಅಂಬ್ಯುಲೆನ್ಸ್ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಗಂಭೀರ ಗಾಯಾಳುವನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ, ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಬಳಿ KA.19.EK.0696 ಸಂಖ್ಯೆಯ ದ್ವಿಚಕ್ರ ವಾಹನ ಸವಾರನು ಅಂಬ್ಯುಲೆನ್ಸ್‌ನ ಸೈರನ್ ಶಬ್ದ ಕೇಳಿದರೂ ದಾರಿ ಬಿಡದೆ ತುರ್ತು ಸಂಚಾರಕ್ಕೆ ಅಡಚಣೆ ಮಾಡಿದ ಘಟನೆ ನಡೆದಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2025, ಕಲಂ 110 ಮತ್ತು 125 ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿ ಗುರುತಿಸಲ್ಪಟ್ಟ ಮಹಮ್ಮದ್ ಮನ್ಸೂರು (38), ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಕರಣ ವಿಚಾರಣೆ ಹಂತದಲ್ಲಿ, ಮಾನ್ಯ ನ್ಯಾಯಾಲಯವು ದಿನಾಂಕ 14-11-2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಿಂದ ತಿಳಿಸಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ತುರ್ತು ಸೇವೆ ವಾಹನಗಳಿಗೆ (ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ, ಪೊಲೀಸ್ ವಾಹನಗಳು) ದಾರಿ ನೀಡುವ ಬಗ್ಗೆ ಕಾನೂನು ಬದ್ಧವಾದ ಜವಾಬ್ದಾರಿ ಇರುವುದಾಗಿ ಮತ್ತು ಈ ರೀತಿಯ ನಿರ್ಲಕ್ಷ್ಯ ನಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Post a Comment