ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 22, 2025 ರಂದು ದಾಖಲಾಗಿದ್ದ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದೆ.
ಪೊಲೀಸರ ಪ್ರಕಾರ, ವಾಹನವನ್ನು ಹಿಂಬಾಲಿಸಿ ನಿಲ್ಲಿಸಿದ ನಂತರ ಪ್ರಕರಣ ದಾಖಲಾಗಿದ್ದು, ಈ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸಂಸ್ಥೆಯ ಭಾಗವಹಿಸುವಿಕೆ ಇಲ್ಲ. ನ್ಯಾಯಸಮ್ಮತ ತನಿಖೆಗಾಗಿ ಪ್ರಕರಣವನ್ನು ಮರುದಿನವೇ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಗಿದೆ.
ಘಟನೆಯ ಸಮಯದಲ್ಲಿ ಪಿಎಸ್ಐ ಬೆಳ್ಳಾರೆ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಉಳಿದ ಅಧಿಕಾರಿಗಳು ತನಿಖಾ ಕಾರ್ಯ ಹಾಗೂ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ತೊಡಗಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಬಂದ ಅರುಣ್ ಕುಮಾರ್ ಪುತ್ತಿಲ ಅವರು, ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗದಂತೆ ಅವುಗಳನ್ನು ಇಳಿಸಲು ವಿನಂತಿಸಿದ್ದರು. ಇನ್ಸ್‌ಪೆಕ್ಟರ್ ರವರು ದೂರವಾಣಿಯಲ್ಲಿ ಅನುಮತಿ ನೀಡಿದ ನಂತರ, ಸ್ಥಳೀಯರು ಹಾಗೂ ಪೊಲೀಸರು ಸೇರಿ ಜಾನುವಾರುಗಳನ್ನು ಇಳಿಸುವ ಕೆಲಸ ಮಾಡಿದ್ದಾರೆಂದು ತಿಳಿಸಲಾಗಿದೆ.
ಆದರೆ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ರೀತಿಯಲ್ಲಿ ಪ್ರಚಾರಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಾನುವಾರುಗಳ ಜೀವ ಉಳಿಸಲು ಪೊಲೀಸ್ ಅಧಿಕಾರಿಗಳು ತುರ್ತು ನಿರ್ಧಾರ ತೆಗೆದುಕೊಂಡಿದ್ದು, ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಪ್ರಭಾವ ಇಲ್ಲ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಘಟನೆಯ ವೇಳೆ ಇನ್ಸ್‌ಪೆಕ್ಟರ್ ರವರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಮಾತನಾಡಿರುವುದು ಕ್ರಮದೋಷವಾಗಿದ್ದು, ಅವರಿಗೆ ಚಾರ್ಜ್ ಮೆಮೊ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ರಾಜಕೀಯ ವೇದಿಕೆಯಾಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿ, ಸತ್ಯವನ್ನು ತಿರುಚಿ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Post a Comment