*ಶ್ರೀ ವಿಶ್ವ ಪ್ರಸನ್ನತೀರ್ಥರು*
*ಸಂತ ಬದುಕಿನ ಶಬ್ದ ಶಿಲ್ಪ*
**********************
*( ಬದುಕು -ಸಾಧನೆಗಳ ಚಿತ್ರಣ )*
ಪೂಜ್ಯ ವಿಶ್ವ ಪ್ರಸನ್ನತೀರ್ಥರ ವಯಸ್ಸು 61 ವರುಷಗಳು. ಸನ್ಯಾಸದ ಬದುಕಿಗೆ 37 ವರುಷಗಳು. ಸಂವತ್ಸರಗಳ ಒಂದು ಮಂಡಲ ಪೂರ್ತಿಗೊಂಡರೆ ವ್ಯಕ್ತಿಯೊಬ್ಬನ ಗರಿಷ್ಠ ಸಾಮರ್ಥ್ಯ ಅನಾವರಣಗೊಂಡು ಗಟ್ಟಿ ವ್ಯಕ್ತಿತ್ವ ರೂಪು ಗೊಳ್ಳುವುದೆಂದು ಭಾವಿಸಿರುವವರು ನಾವು. ಮುಂದೆ ಅದು ಪರಿಪಕ್ವಗೊಂಡು ಮತ್ತಷ್ಟು ಹೊಳಪು ಗೊಳ್ಳುವುದು ಹಾಗೂ ಪ್ರಭಾವಿಸುವುದು. ಇದು ಅನೇಕರ ಅರಿವಿಗೆ ಬಂದ ಸತ್ಯ.ನಮ್ಮೆಲ್ಲರ ಮನವ ಆವರಿಸಿ ಕಣ್ಮನಗಳಲ್ಲಿ ತುಂಬಿರುವ ಗುರು ಪೂಜ್ಯ ವಿಶ್ವೇಶತೀರ್ಥರಲ್ಲೂ ನಾವು ಅದನ್ನೇ ಕಂಡಿರುವೆವು.
ಸಂಸಾರಿಗಳಾಗಿ ಐಹಿಕ ಸುಖ ಕಾಣುತ್ತಿರುವ ಜಗದ ಜನರ ನಡುವೆ, ಮಾನವ ಸಹಜ ಬಯಕೆಗಳನ್ನು ಬದಿಗೊತ್ತಿ, ಅರಿಷಡ್ವೆರಿಗಳ ಗೆದ್ದು,ಮತ ಧರ್ಮಗಳ ಸಾರ ಸರ್ವಸ್ವ ಕಾಪಿಡಲು ಮನವ ಹರಿಸಿದ ಯೋಗಿಗಳ ತ್ಯಾಗ ಸಮಾಜದ ಉನ್ನತಿಗಾಗಿರುತ್ತದೆ. ಸನ್ಯಾಸ ಅದೊಂದು ವೃತ್ತಿಯಲ್ಲ. ತಪಸ್ಸು. ಬದುಕು ಪಣವಾಗಿಟ್ಟು ಆದರ್ಶಗಳ ಕಟ್ಟಿ ಬೆಳೆಸಿ ಸಮಾಜಕ್ಕೆ ತೋರುವ ತ್ಯಾಗದ ಬದುಕು. ಹೀಗೆ ಸಂತರೊಬ್ಬರು ನಡೆಸಿದ ಸೇವೆಗಳ ಸ್ಮರಿಸುವುದು - ಬೆಂಬಲಿಸುವುದು - ಸಮಾಜಕ್ಕೆ ಕಟ್ಟಿಕೊಡುವುದು ಶಿಷ್ಯರ ಕರ್ತವ್ಯ. ಇಂದಿನ ನೆನಪುಗಳು ನಾಳೆಗಿಲ್ಲದೆ, ಮರೆವು ಆವರಿಸುವ ಮನುಜರಿಗೆ ಮತ್ತೆ ಮತ್ತೆ ಮೆಲುಕು ಹಾಕಲು ಇರುವ ಹಾದಿಯೊಂದೇ. ಅದು ಕೃತಿ ರೂಪದಲ್ಲಿ ದಾಖಲಿಸಲ್ಪಡುವುದಾಗಿದೆ. ಅಗಲಿದ ಅನೇಕ ಮಹಾತ್ಮರೆಲ್ಲರೂ ಇನ್ನೂ ಜೀವಂತವಿರುವುದು ಕೃತಿಗಳಿಂದ.
ಸಾಧನೆಗಳು ಪುಸ್ತಕ ರೂಪದಲ್ಲಿ ತಾಳಿದರೆ ಸಾಲದು. ಅವರ ಸೇವೆಗಳ ಫಲ ಉಂಡವರು- ಒಡನಾಡಿಗಳು - ಪ್ರಭಾವಿಸಲ್ಪಟ್ಟವರು - ತತ್ವಾದರ್ಶಗಳ ಹಾದಿ ತುಳಿದವರು ಇಂತಹ ಕೃತಿಗಳನ್ನು ಮೆಲುಕು ಹಾಕಬೇಕು. ಕಾಪಿಡಬೇಕು. ಇತರರಿಗೆ ತಿಳಿಯಪಡಿಸಬೇಕು. ಪುಟಗಳ ತಿರುವಿ ಓದುತ್ತಾ ಇತರರನ್ನು ಓದಿಸಬೇಕು. ಆಗಲೇ ನಮ್ಮ ಬಾಳು ಸತ್ಪದದಲ್ಲಿ ಮುನ್ನಡೆಯಲು ಸ್ಪೂರ್ತಿ. ಅದು ನಮ್ಮ ಗುರುಗಳ ಸಾಧನೆಗೆ ಸಲ್ಲಿಸುವ ಗೌರವ. ಅವರಿಂದ ಇನ್ನಷ್ಟು ಸಾಧನೆಗಳು ಹೊರಹೊಮ್ಮಲು ನಾವು ಶಕ್ತಿ ತುಂಬುವ ಪರಿ.
ಪೂಜ್ಯ ವಿಶ್ವಪ್ರಸನ್ನರದು ದಂಡಿಸಿದ ದೇಹ.ದೃಢ ಚಿತ್ತ. ಪರಿಪಕ್ವ ನಡೆ. ಗುರುಭಕ್ತಿ -ದೇವ ಭಕ್ತಿ- ತ್ಯಾಗ ಪೂರ್ಣ ಬದುಕು. ಆದರ್ಶಗಳು ಸಮ್ಮಿಳಿತಗೊಂಡ ಬಹುಮುಖಿ ವ್ಯಕ್ತಿತ್ವ.ಈ ನಾನಾ ಮುಖಗಳ ಸಾಧನೆಗಳ ಸಂಗ್ರಹಿಸಿ ಜತನದಿಂದ ಪೋಣಿಸಿಡುವುದು ನಾವೆಲ್ಲ ಅರ್ಪಿಸುವ ಭಕ್ತಿಯ ಗುರುಕಾಣಿಕೆ. ಅವರಿಗಿದು ಅವಶ್ಯವಿಲ್ಲ. ನಮಗಿದು ಅವಶ್ಯ. ಸಂತರು ಹೀಗಿರಬೇಕೆಂದು ತೋರುವ ಕೈಮರ ಇದಾಗಿದೆ.
ಈ ಕೃತಿಯು ಇದೇ ದಶಂಬರ 22ನೇ ತಾರೀಕು ಸೋಮವಾರ ಗುರು ವಿಶ್ವೇಶತೀರ್ಥರ ಪೂರ್ವಾರಾಧನೆಯ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವುದು. 1/6 ಗಾತ್ರದ ಕ್ಯಾಲಿಕೋ ಬೈಂಡ್, 80 ಜಿ.ಎಸ್. ಎಮ್ ಪೇಪರ್ ಬಳಸಲಾಗಿದೆ. 44 ಬಣ್ಣದ ಪುಟಗಳಲ್ಲಿ ಜೀವಮಾನದ ಅಮೂಲ್ಯ ಭಾವಚಿತ್ರಗಳು ಅನಾವರಣಗೊಂಡಿವೆ. ಪೂಜ್ಯರು ಭಕ್ತರ ಕಣ್ಣಲ್ಲಿ ಬಗೆಬಗೆಯಾಗಿ ಕಂಡಿರಬಹುದು. ಸಮೀಪ ವರ್ತಿಗಳ ಅನುಭವಗಳು ಅಕ್ಷರರೂಪಕ್ಕಿಳಿದು 252 ಪುಟಗಳಲ್ಲಿ ಶಬ್ದಶಿಲ್ಪ ಕಂಡಿವೆ. ಒಟ್ಟು 296 ಪುಟಗಳು. ತನ್ನ ಗುಣಮಟ್ಟದಿಂದ ಸಂಗ್ರಹ ಯೋಗ್ಯ ಕೃತಿ ಇದು. ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು ಸಂಪರ್ಕಿಸಬಹುದು.
*ಟಿ ನಾರಾಯಣ ಭಟ್ ರಾಮಕುಂಜ.*
*ಸಂಪಾದಕರು ಹಾಗೂ ಲೇಖಕರು.*
Post a Comment