ಕುಕ್ಕೆ: ಎಸ್‌ಎಸ್‌ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಶ್ರೀ ದೇವಳಕ್ಕೆ ಬೃಹತ್ ಹಸಿರು ಕಾಣಿಕೆ ಸಮರ್ಪಣೆ

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ, ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಬೃಹತ್ ಹಸಿರು ಕಾಣಿಕೆಯನ್ನು ಶ್ರೀ ದೇವರಿಗೆ ಅರ್ಪಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದಿಂದ ಸಂಗ್ರಹಿಸಿದ ಸುವಸ್ತುಗಳನ್ನು ಅಲಂಕರಿಸಿದ ವಾಹನಗಳಲ್ಲಿ ದೇವಳಕ್ಕೆ ಕೊಂಡೊಯ್ಯುವ ಮೂಲಕ ಅದ್ಭುತ ಸೇವೆ ಸಲ್ಲಿಸಲಾಯಿತು.

ವಿದ್ಯಾರ್ಥಿಗಳಿಂದ ಸಲ್ಲಿಸಲಾದ ವಸ್ತುಗಳು

1290 ಕೆಜಿ (12 ಕ್ವಿಂಟಾಲ್ 90 ಕೆಜಿ) ಸೋನಮಸುೂರಿ ಅಕ್ಕಿ

1650 ಕೆಜಿ (16 ಕ್ವಿಂಟಾಲ್ 50 ಕೆಜಿ) ತರಕಾರಿ

1850 ತೆಂಗಿನಕಾಯಿ

261 ಕೆಜಿ ಬೆಲ್ಲ

200 ಕೆಜಿ ಸಕ್ಕರೆ

700 ಹಣ್ಣು ಅಡಿಕೆ

1.5 ಕೆಜಿ ಏಲಕ್ಕಿ, ಹಿಂಗಾರ, ದನದ ತುಪ್ಪ, ಜೇನು ತುಪ್ಪ

ಬಾಳೆಹಣ್ಣು, ಬಾಳೆ ಎಲೆ, ಬಾಳೆಗೊನೆ

ಕಾಳು ಮೆಣಸು, ಸೀಯಾಳ ಇತ್ಯಾದಿ

ತರಕಾರಿಗಳಲ್ಲಿ ಸೌತೆ, ಕುಂಬಳಕಾಯಿ, ಸೀಮೆ ಬದನೆ, ಆಲೂಗಡ್ಡೆ, ಟೊಮೇಟೋ, ಹೀರೆಕಾಯಿ, ಅಲಸಂಡೆ, ಸಹಿಗೆಣಸು, ಚೀನಿಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಒಟ್ಟು 1650 ಕೆಜಿ ತರಕಾರಿ ಸಲ್ಲಿಸಲಾಯಿತು.
ವಿದ್ಯಾರ್ಥಿ–ಬೋಧಕ ವರ್ಗದ ಸೇವೆ

ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ಸುವಸ್ತುಗಳನ್ನು ತರಗತಿಗಳಲ್ಲಿ ಸಂಗ್ರಹಿಸಿ ಬಳಿಕ ರಂಗಮಂದಿರದಲ್ಲಿ ಒಟ್ಟುಗೂಡಿಸಿದರು. ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಹಿರಿಯ ವಿದ್ಯಾರ್ಥಿ ಗಗನ್ ಮತ್ತು ತಂಡ ನೀಡಿದ ಧನ ಸಹಾಯದಿಂದ ಹೆಚ್ಚುವರಿ ಅಕ್ಕಿ, ತರಕಾರಿ, ಸಕ್ಕರೆ ಮತ್ತು ಬೆಲ್ಲ ಖರೀದಿಸಲಾಯಿತು.

ರಂಗಮಂದಿರದಲ್ಲಿ ಪ್ರಾಚಾರ್ಯ ಸೋಮಶೇಖರ್ ನಾಯಕ್ ದೀಪ ಬೆಳಗಿ ದೇವತಾ ಪ್ರಾರ್ಥನೆ ನೆರವೇರಿಸಿದರು. ಹಿರಿಯ ಸಹಶಿಕ್ಷಕ ಎಂ. ಕೃಷ್ಣ ಭಟ್ ಸುವಸ್ತುಗಳಿಗೆ ಪೂಜೆ ನೆರವೇರಿಸಿದರು.
ದೇವಳಕ್ಕೆ ಹಸ್ತಾಂತರ
ಅಲಂಕರಿಸಿದ ವಾಹನಗಳಲ್ಲಿ ಹಸಿರು ಕಾಣಿಕೆಯನ್ನು ದೇವಳಕ್ಕೆ ಕೊಂಡೊಯ್ಯಲಾಯಿತು. ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಹಿಂಗಾರ ನೀಡಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ಸದಸ್ಯರು ಸೌಮ್ಯಾ ಭರತ್, ಪ್ರವೀಣ ರೈ ಮರುವಂಜ, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ ಮತ್ತು ಹಲವರು ಉಪಸ್ಥಿತರಿದ್ದರು.

ಅಧಿಕಾರಿಗಳ ಪ್ರತಿಕ್ರಿಯೆ

ಹರೀಶ್ ಎಸ್. ಇಂಜಾಡಿ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ:
“ವಿದ್ಯಾರ್ಥಿಗಳು ಸಲ್ಲಿಸಿದ ಈ ಬೃಹತ್ ಹಸಿರು ಕಾಣಿಕೆ ದೇವರಿಗೆ ಪ್ರೀತಿಪಾತ್ರವಾಗುತ್ತದೆ. ಇವರ ಸೇವೆ ಭವಿಷ್ಯದ ಪ್ರಗತಿಗೆ ಪೂರಕವಾಗಲಿ. ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದ ಇರಲಿ.”

ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ:
“ವಿದ್ಯಾರ್ಥಿಗಳು ಮತ್ತು ಬೋಧಕ ವೃಂದ ಸಲ್ಲಿಸಿದ ಈ ಸೇವೆ ಭಗವಂತನ ಕೃಪೆಗೆ ಪಾತ್ರವಾಗಲಿ. ವಿದ್ಯಾಸಂಸ್ಥೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ.”

Post a Comment

Previous Post Next Post