*ಹಳ್ಳಿಗಾಡಿನಲ್ಲಿ ಬೆಳೆದು ನಿಂತ ದೈತ್ಯ ಕಲಾ ಪ್ರತಿಭೆ* *ಪಿ ಎಸ್ ಪುಣಚಿತ್ತಾಯ*

ಕಲಾ ಲೋಕದ ಧ್ರುವತಾರೆ ಅವರು........ ತನ್ನ ಕಲಾ ಪ್ರತಿಭೆಯಿಂದಲೇ ಮಿನುಗುತಾರೆಯಂತಿರುವರು...... ಅವರೊಬ್ಬ ಜಮೀನ್ದಾರ. ಕೃಷಿಕ. ಲೋಕದ ಅನ್ನದಾತ... ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೆಟ್ಟಗುಡ್ಡಗಳ ಕಣಿವೆಯ ನಟ್ಟನಡುವೆ ಅವರು ಹುಟ್ಟಿ ಬೆಳೆದ ಊರು.... ಒಂದೇ ಒಂದು ವಾಹನ ಸಾಗುವಷ್ಟು ಅಗಲದ ರಸ್ತೆ..... ಒಂದಿಷ್ಟು ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಉರುಳುವಂತಿರುವ ಹಾದಿ...... ಆದರೆ ರಮಣೀಯ ದೃಶ್ಯ.

 ಕಲಾ ಲೋಕದ ಆ ಹಿರಿಯ ದಿಗ್ಗಜನನ್ನು ಒಮ್ಮೆ ಭೇಟಿ ಮಾಡಬೇಕು.... ಅವರ ಕೈಚಳಕದಿಂದ ಹೊರಹೊಮ್ಮಿದ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳಬೇಕು ಎಂಬ ಮಹಾದಾಸೆಯಿಂದ ಅಲ್ಲಿ ಹೋದೆವು.........

 ಗೂಗಲ್ ಮ್ಯಾಪ್ ಹಾಕುತ್ತಾ ಹೋದರೆ ಪ್ರಪಾತಕ್ಕೆ ಕರೆದುಕೊಂಡು ಹೋಗಬಹುದೋ ಎಂಬ ಭಯದಿಂದಲೇ ರಸ್ತೆಯ ಬದಿಯಲ್ಲಿ ಸಿಕ್ಕ ಸಿಕ್ಕ ಮಳೆಯಾಳಿಗರಲ್ಲಿ, ಅರೆಬರೆ ಮಳೆಯಾಲ ಭಾಷೆಯಲ್ಲಿ ಅವರ ಮನೆಯ ದಾರಿ ಯಾವುದೆಂದು ಕೇಳುತ್ತಲೇ ಸಾಗಿದೆವು. ಅವರ ಅರಿಯದವರಿಲ್ಲ. ಆರ್ಟಿಸ್ಟ್ ಪುಣಚಿತ್ತಾಯರೆಂದೇ ಊರ ಮಂದಿ ಕರೆವ ಹೆಸರು. ಕಲಾವಿದರೊಬ್ಬರಿಗೆ ಇದಕ್ಕಿಂತ ಹೆಚ್ಚು ಗೌರವ ನೀಡಲು ಹಳ್ಳಿಗರಿಂದ ಸಾಧ್ಯವಿಲ್ಲ. ಎಲ್ಲರೂ ಕಲಾಗ್ರಾಮದ ಕಡೆಗೆ ಕೈ ತೋರಿ ಮುನ್ನಡೆಸಿದರು. ಮೊಬೈಲ್ ಮೂಲಕ ಸಂಪರ್ಕಿಸಿದ ನಮ್ಮನ್ನು ದಂಪತಿಗಳು ದಾರಿ ನೋಡುತ್ತಿದ್ದರು. ಆ ಕಲಾಮಂದಿರಕ್ಕೆ ಕಾಲಿಡುತ್ತಿದ್ದಂತೆ ಶಾಲು ಹೊದಿಸಿ ಆಶೀರ್ವದಿಸಿದರು. 82 ವರ್ಷದ ಆ ಹಿರಿಯ ಜೀವ ಲವಲವಿಕೆಯಿಂದ ಗತಕಾಲದ ನೆನಪುಗಳನ್ನು ಬಿಚ್ಚಿಡುತ್ತಾ ಹರಸಿದ್ದು ಕಂಡು ಆನಂದ ಭಾಷ್ಪ ಸುರಿಯಿತು. ಅವರ ಮನಸ್ಸಿನ ಮುಗ್ದತೆ ನಮ್ಮೆಲ್ಲರ ಮನವ ಆವರಿಸಿ ಬಿಟ್ಟಿತು.

 ಮನೆಯ ಹಜಾರ -ಚಾವಡಿ - ತೆರೆದ ಚಿತ್ರ ಕೊಠಡಿ -ಅಡುಗೆ ಕೋಣೆ - ಮಲಗುವ ಕೋಣೆ - ಶೌಚಗೃಹ -ಮಹಡಿ ಎಲ್ಲೂ ಬಿಡದೆ ಅವರ ಕೈಚಳಕದಿಂದ ಹೊರಹೊಮ್ಮಿದ ಚಿತ್ರಗಳು ಗೋಡೆಯೆಲ್ಲಾ ಅಲಂಕರಿಸಿದ್ದವು. ಅವುಗಳು ಕೇವಲ ಚಿತ್ರಗಳಾಗಿರದೆ ಅವೆಲ್ಲವೂ ಬದುಕಿಗೆ ಸಂದೇಶ ಸಾರುವಂತಿವೆ.

 ಅದೊಂದು ದೃಶ್ಯ ಅಚ್ಚರಿ ಹುಟ್ಟಿಸಿತು....... ಶಯ್ಯಾಗೃಹದಲ್ಲಿ ಎದ್ದೊಡನೆ ನೋಡುವ ಭಾವಚಿತ್ರ ಮಾತಾಪಿತರದು..... ಅವರು ಆರಾಧಿಸುತ್ತಿದ್ದ ವಿಘ್ನ ನಿವಾರಕನ ಚಿತ್ರವು ಪಕ್ಕದಲ್ಲಿತ್ತು . ತನಗೆ ಬದುಕು ನೀಡಿದ ಪೂಜ್ಯರನ್ನು ದೇವತಾ ಸ್ವರೂಪಿಗಳಂತೆ ಕಾಣುವ ಆ ಸಂಸ್ಕಾರಯುತ ಬದುಕು ಎಲ್ಲರಿಗೂ ಬದುಕಿನ ಪಾಠದಂತಿದೆ......

 ಅವರ ಕಲಾ ತುಡಿತ ವಯಸ್ಸನ್ನೂ ಸೋಲಿಸಿದಂತಿದೆ. ಅವರ ಮನೋಲ್ಲಾಸ, ನೆನಪುಗಳ ನೇವರಿಕೆ, ಕಿರಿಯರ ಮೇಲಿನ ಪ್ರೀತಿ ಹರಿಸುವಿಕೆ, ಅನ್ಯರ ಬೆನ್ನು ತಟ್ಟುವ ಗುಣ, ಗುರುತಿಸುವಿಕೆ ಅವರಲ್ಲಿ ಇನ್ನೂ ಜೀವನೋತ್ಸಾಹ ಹೆಚ್ಚಿಸಿದಂತಿದೆ.

 ತನ್ನ ಸ್ವಪ್ರತಿಭೆಯಿಂದಲೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರು. ಆ ಹಳ್ಳಿಯ ಮೂಲೆಗೂ ಅಚ್ಚಳಿಯದ ಕಲಾಗ್ರಾಮವೆಂಬ ಹೆಸರನ್ನು ತಂದಿಟ್ಟರು. ಕೇರಳ ಸರಕಾರವೇ ಹೆದ್ದಾರಿಯ ಪಕ್ಕದಲ್ಲಿ ಕಲಾಗ್ರಾಮಕ್ಕೆ ದಾರಿ ಸೂಚಿಯನ್ನು ಹಾಕಿ ನೀಡಿರುವ ಗೌರವ ಅವರಿಗೆ ಒದಗಿ ಬಂದಿರುವ ಎಲ್ಲಾ ಪ್ರಶಸ್ತಿಗಳನ್ನು ಮೀರಿಸುವಂತಿದೆ. ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಮೂಲಕ ಆ ಹಳ್ಳಿಗೆ ಮತ್ತೊಂದು ಗೌರವದ ಗರಿ ತಂದಿಟ್ಟರು. ಸಿಕ್ಕ ಗೌರವ ಪ್ರಶಸ್ತಿಗಳ ಎಣಿಸುವುದು ಮೂರ್ಖತನವಾದೀತು. ಅಷ್ಟೊಂದು ಪ್ರಶಸ್ತಿಗಳು ಮನೆ ತುಂಬಾ ತುಂಬಿ ಹೋಗಿವೆ.

 ಪತಿಗೆ ತಕ್ಕಂತಹ ಸತಿ ಭಾರತಿ. ಅವರ ನಗುಮುಖ ಇನ್ನೂ ಕಳೆ ಗುಂದಿಲ್ಲ. ಆತಿಥ್ಯದ ತುಡಿತ ಇನ್ನೂ ಬತ್ತಿ ಹೋಗಲಿಲ್ಲ. ಇವರ ಪುತ್ರನೂ ಅಷ್ಟೇ ಬಲದೊಡ್ಡ ಶಿಲ್ಪ ಕಲಾವಿದರು.

 ನಾನು ನನ್ನ ಪತ್ನಿ ಸಂಧ್ಯಾ, ನಾದಿನಿ ಮಾಲಾ, ಅವಳ ಪತಿ ಶ್ರೀಪತಿ ಜೊತೆಗೂಡಿ ನೀಡಿದ ಭೇಟಿ ಅವಿಸ್ಮರಣೀಯ. ಸಾರ್ಥಕತೆಯ ಭಾವ ತುಂಬಿ ಬಂತು. ಆ ಹಳ್ಳಿಗೆ ಹೆಸರು ತಂದಿತ್ತ ಮಹಾನ್ ಪ್ರತಿಭೆಗೆ ಶಿರಭಾಗಿ ನಮಿಸುವೆವು. 
 *ಟಿ ನಾರಾಯಣ ಭಟ್ ರಾಮಕುಂಜ*

Post a Comment

Previous Post Next Post