ಸುಬ್ರಹ್ಮಣ್ಯ:ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕುಮಾರಧಾರಾ ನದಿಯ ತೀರದಲ್ಲಿ ನವೆಂಬರ್,17 ರಂದು ನಡೆದ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. KA05AF8097 ಸಂಖ್ಯೆಯ ಇನೋವಾ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನು ತನ್ನೊಂದಿಗೆ ತಂದಿದ್ದ ಪ್ಲಾಸ್ಟಿಕ್, ಹಳೆ ವಸ್ತುಗಳು ಸೇರಿದಂತೆ ದೊಡ್ಡ ಚೀಲದಷ್ಟು ತ್ಯಾಜ್ಯವನ್ನು ನೇರವಾಗಿ ನದಿಗೆ ಎಸೆದಿದ್ದಾನೆ, ಪರಿಸರಕ್ಕೆಹಾನಿ ಉಂಟು ಮಾಡಿದ್ದಾನೆ.
ಸ್ಥಳೀಯರು ಹಾಗೂ ಪತ್ರಕರ್ತ ಲೋಕೆಶ್ ಅವರು ಘಟನೆ ಗಮನಿಸಿ ಎಚ್ಚರಿಸಿದಾಗ,
ಜವಾಬ್ದಾರಿ ಇಲ್ಲದ ಆ ವ್ಯಕ್ತಿ ಕೆಟ್ಟ ಉತ್ತರ ನೀಡಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದು ಕಸವನ್ನು ನದಿಗೆ ಎಸೆದು ಓಡಿಹೋದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಟೂರಿಸ್ಟ್ ಇನೋವಾ ಕಾರಿನ ಚಾಲಕರ ನಿರ್ಲಕ್ಷ, ಬೇಜವಾಬ್ದಾರಿ ಕೂಡ ಬೆಳಕಿಗೆ
ಕೇವಲ ಕಸ ಎಸೆದ ವ್ಯಕ್ತಿಯಷ್ಟೇ ಅಲ್ಲ, ಈ ಘಟನೆಯಲ್ಲಿ ಟೂರಿಸ್ಟ್ ವಾಹನದ ಚಾಲಕರ ನಡವಳಿಕೆಯೂ ಸಮಾನವಾಗಿ ಖಂಡನೀಯವಾಗಿದೆ.
ಚಾಲಕನು ಸೇತುವೆ ಮೇಲೆಯೇ ವಾಹನ ನಿಲ್ಲಿಸಿ, ಕಸ ಎಸೆಯಲು ಅವಕಾಶ ನೀಡಿರುವುದು ಕಾನೂನು ಉಲ್ಲಂಘನೆಯಲ್ಲದೆ, ಸಮಾಜದ ಮೇಲಿನ ಜವಾಬ್ದಾರಿಯಿಲ್ಲದ ವರ್ತನೆ.
ಒಬ್ಬ ಟೂರಿಸ್ಟ್ ಚಾಲಕನು –
ಪ್ರವಾಸಿಗರಿಗೆ ಮಾರ್ಗದರ್ಶಕ,
ಸ್ಥಳೀಯ ಸಂಪ್ರದಾಯ-ಶಿಸ್ತು ತೋರಿಸುವ ವ್ಯಕ್ತಿ,
ಪರಿಸರ ಸಂರಕ್ಷಣೆಯ ಅರಿವು ನೀಡುವ ಜವಾಬ್ದಾರಿ ಹೊಂದಿರಬೇಕು.
ಆದರೆ ಇಲ್ಲಿ ಚಾಲಕನ ನಡೆ ಅರಿವಿಲ್ಲದ, ಅಸಮಾಜಿಕ ಹಾಗೂ ಪರಿಸರಕ್ಕೆ ವಿಷಕಾರಕ ಕ್ರಿಯೆಗೆ ಪ್ರೋತ್ಸಾಹ ನೀಡಿದಂತೆ ಕಾಣುತ್ತಿದೆ. ಇಂತಹ ಚಾಲಕರ ವಿರುದ್ಧ ಪ್ರತ್ಯೇಕ ದಂಡ ಹಾಗೂ ಕಾನೂನು ಕ್ರಮ ಜರುಗಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.
ನದಿ ಕಲುಷಿತವಾಗಿಸುತ್ತಿರುವವರ ಮೇಲೆ ಕಠಿಣ ಕ್ರಮದ ಅವಶ್ಯಕತೆ
ಕುಮಾರಧಾರಾ ನದಿ ಪವಿತ್ರವಾದ ತೀರ್ಥ. ಭಕ್ತರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ನದಿಗೆ ಇಳಿಯುವ ಸ್ಥಳದಲ್ಲಿ ಪ್ಲಾಸ್ಟಿಕ್, ಕಸ, ತ್ಯಾಜ್ಯಗಳನ್ನು ಎಸೆವುದರಿಂದ ನದಿ ಕಲುಷಿತವಾಗುತ್ತಿದೆ.
ನಾಮಫಲಕಗಳು ಹಾಕಿದರೂ, ಎಚ್ಚರಿಕೆ ನೀಡಿದರೂ, ನಿಯಮಗಳನ್ನು ಸ್ಪಷ್ಟ ಪಡಿಸಿದರೂ—
ಇಂತಹ ಅಸಮಾಜಿಕ ವ್ಯಕ್ತಿಗಳ ನಡವಳಿಕೆ ನದಿಯ ಸ್ವಚ್ಛತೆಯನ್ನು ನಾಶಮಾಡುತ್ತಿದೆ.
ಸ್ಥಳೀಯರ ಅಭಿಪ್ರಾಯ ಪ್ರಕಾರ:
> “ಇಂಥ ಘಟನೆ ತಡೆಯಲು, ಕಸ ಬಿಸಾಡಿದ ವ್ಯಕ್ತಿಗೂ, ಅವಕಾಶ ನೀಡಿದ ಚಾಲಕರಿಗೂ ಕಠಿಣ ಕಾನೂನು ಕ್ರಮ, ದಂಡ ಹಾಗೂ ವಾಹನದ ಮೇಲೂ ಕ್ರಮ ಕೈಗೊಳ್ಳಬೇಕು.”
ನಮ್ಮ ಸಮಾಜಕ್ಕೆ ಸಂದೇಶ
ಸಾಮಾನ್ಯ ಜ್ಞಾನವಿಲ್ಲದ ಕೆಲವರ ಅಸಂಸ್ಕೃತ ವರ್ತನೆದಿಂದ ನದಿ, ಪ್ರಕೃತಿ, ಜನರ ಆರೋಗ್ಯ ಹಾಳಾಗುತ್ತದೆ.
ನದಿಗೆ ಕಸ ಎಸೆಯುವುದು ಪಾಪ ಮಾತ್ರವಲ್ಲ – ದಂಡನೀಯ ಅಪರಾಧ.
ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರರಾಗಿರಬೇಕು.
Post a Comment