ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅನನ್ಯ: ಪ್ರೊ. ದಿನೇಶ್ ಕಾಮತ್
ಸುಬ್ರಹ್ಮಣ್ಯ: ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳು ಸಂಸ್ಥೆಯ ಆಸ್ಥಿಯಾಗುತ್ತಾರೆ. 1983ರಿಂದ 2024ರವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಧಾರಸ್ತಂಭವಾಗಿದೆ ಎಂದು ಕೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ದಿನೇಶ್ ಕಾಮತ್ ಹೇಳಿದರು.
ಭಾನುವಾರ ಕೆ.ಎಸ್.ಎಸ್. ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ‘ಕುಸುಮ ಸ್ನೇಹ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ತಾವು ಕಲಿತ ವಿದ್ಯಾಸಂಸ್ಥೆ ನಮಗೆ ಮಾತೃಸಮಾನ. ಆದ್ದರಿಂದ ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯು ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ ಮತ್ತು ನಿಷ್ಠೆ ಹೊಂದಿರಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಕಾರ್ಯದರ್ಶಿ ತೇಜಸ್ ಕಳಿಗೆ, ಕಾರ್ಯಕ್ರಮ ಸಂಯೋಜಕರಾದ ವಿಮಲಾ ರಂಗಯ್ಯ, ಲೋಕೇಶ್ ಬಿ.ಎನ್, ಶ್ರೀಲತಾ ಕಮಿಲ ವೇದಿಕೆಯಲ್ಲಿದ್ದರು.
ಗೌರವಾರ್ಪಣೆ
ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪ್ರೊ. ದಿನೇಶ್ ಕಾಮತ್, ಪ್ರೊ. ಕೆ.ಆರ್. ಶೆಟ್ಟಿಗಾರ್, ಪ್ರೊ. ಬಾಲಕೃಷ್ಣ ಪೈ, ಪ್ರೊ. ಉದಯ ಕುಮಾರ್, ನಿವೃತ್ತ ಉಪನ್ಯಾಸಕರಾದ ಡಾ. ತಿಲಕ್ ಎ.ಎ, ಜಯರಾಮ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಯೇನೆಕಲ್ಲು, ನಿವೃತ್ತ ಗ್ರಂಥಪಾಲಕಿ ಸುನಿತಾ ಮೂಲೆಮಜಲು, ನಿವೃತ್ತ ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಚಂದ್ರಾವತಿ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಇತರ ಉಪನ್ಯಾಸಕರು ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನಿವೃತ್ತ ಉಪನ್ಯಾಸಕರೊಂದಿಗೆ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
إرسال تعليق